ಜಿಲ್ಲೆ

ನಿರಂತರ ಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯ

ಬ್ಯಾಡಗಿ: ಸಾಧನೆ ಎಂದಿಗೂ ಸಾಧಕರ ಸೊತ್ತು, ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ ಹೇಳಿದರು.

ಪಿಯುಸಿಯಲ್ಲಿ ತಾಲೂಕಿನ ಕಾಗಿನೆಲೆ ಗ್ರಾಮದ ಹಕ್ಕಬುಕ್ಕ ಸ್ವತಂತ್ರ ಪದವಿಪೂರ್ವ ಕಾಲೇಜ್​ನ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಶೇ. 86.48 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 98.52ರಷ್ಟು ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಹಿಂದೆ ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪಾಲಕರ ಕಾಳಜಿ ಹೆಚ್ಚಿದೆ. ಹೀಗಾಗಿ ಶಾಲೆಯ ಫಲಿತಾಂಶ ತಾಲೂಕು ಮಟ್ಟದಲ್ಲಿ (ಶೇ. 94.28) ಪ್ರಥಮ ಸ್ಥಾನ ಪಡೆದಿದೆ. ಸಂಸ್ಥೆಯ ವತಿಯಿಂದ ಇಂತಹ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ನೀಡಲಾಗುತ್ತಿದೆ ಎಂದರು.

ಸಿಪಿಐ ಭಾಗ್ಯವತಿ ಬಂಟೆ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದೆ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವ ತವಕದಲ್ಲಿದ್ದರೆ, ಶಾಲಾ, ಕಾಲೇಜುಗಳು ತಮ್ಮ ಶಾಲೆಗಳು ಉತ್ತಮ ಫಲಿತಾಂಶ ನೀಡಬೇಕೆಂದು ಪೈಪೋಟಿ ನಡೆಸುತ್ತಿವೆ. ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಬೇಕು ಎಂದರು.

ಕಲಾವಿಭಾಗದಲ್ಲಿ ಮನೀಷಾ ನದಾಫ್ ಪ್ರಥಮ ಶೇ. 94, ವಾಣಿಜ್ಯ ವಿಭಾಗದಲ್ಲಿ ಕೃಷ್ಣವೇಣಿ ತಹಸೀಲ್ದಾರ ಪ್ರಥಮ ಶೇ. 91.33 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಿರಿಯ ಶ್ರೀಗಳಾದ ಅಮೋಘಸಿದ್ಧ ಶ್ರೀಗಳು, ಸದಾನಂದಗೌಡ ಪಾಟೀಲ, ಪ್ರಾಂಶುಪಾಲ ಎಂ.ಬೀರಪ್ಪ ಇದ್ದರು.