ಜಿಲ್ಲೆ

ನಿರಂತರ ಶ್ರಮದಿಂದ ಗೆಲುವು ಸಾಧ್ಯ: ಯುಪಿಎಸ್‌ಸಿ ಸಾಧಕಿ ಎಂ. ಪೂಜಾ ಅಭಿಮತ

ಮೈಸೂರು: ಸಕಾರಾತ್ಮಕ ಮನೋಭಾವ, ನಿರಂತರ ಶ್ರಮ, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಗೆಲುವು ನಿಶ್ಚಿತ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದಿರುವ ಎಂ. ಪೂಜಾ ಹೇಳಿದರು.
ನಗರದ ಜ್ಞಾನಬುತ್ತಿ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಫ್‌ಡಿಎ, ಎಸ್‌ಡಿಎ, ಪಿಸಿ ಪರೀಕ್ಷಾ ತರಬೇತಿ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧಾರ್ಥಿಗಳು ತಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ತೊಡೆದು ಹಾಕಿ ಪರೀಕ್ಷೆಗಳಿಗೆ ಅಗತ್ಯವಾದ ಪಠ್ಯಕ್ರಮಗಳನ್ನು ಅಭ್ಯಾಸ ಮಾಡಬೇಕು. ಮಾಡಿದ ಅಭ್ಯಾಸವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು. ಎಸ್‌ಡಿಎ ಮತ್ತು ಪಿಸಿ ಪರೀಕ್ಷೆಗಳಿಂದ ಹಿಡಿದು ಐಎಎಸ್, ಐಪಿಎಸ್ ಪರೀಕ್ಷೆಗಳವರೆಗೆ ಒಂದೇ ರೀತಿಯ ಪಠ್ಯಕ್ರಮ, ಮಾದರಿ ಇರುತ್ತದೆ. ಆದ್ದರಿಂದ ಸ್ಪರ್ಧಾರ್ಥಿಗಳು ಏನು ಓದಬೇಕು, ಏನನ್ನು ಓದಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಅಭ್ಯಸಿಸಬೇಕು ಎಂದವರು ತಿಳಿಸಿದರು.
ಮೇಲು, ಕೀಳು ಎಂಬ ಭೇದ-ಭಾವವಿಲ್ಲದೆ ಪರೀಕ್ಷೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಅಧ್ಯಯನ ಮಾಡಿದ್ದೇ ಆದಲ್ಲಿ ಗೆಲುವಿನತ್ತ ಸಾಗುತ್ತೇವೆ ಎಂದು ಪೂಜಾ ಸಲಹೆ ನೀಡಿದರು.
ಇಷ್ಟಪಟ್ಟು ಓದಿ:
ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಇಷ್ಟಪಟ್ಟು ನಡೆಸುವ ಅಧ್ಯಯನವೇ ಮುಖ್ಯ. ಓದಿನ ವೇಳೆಯಲ್ಲಿ ಬೇರೆ ವಿಷಯಗಳಿಗೆ ಕಿವಿಗೊಡದೆ ಓದಿಗಷ್ಟೇ ಮಹತ್ವ ನೀಡಿ ಸಾಧನೆ ಮಾಡಬೇಕು. ಪರಿಶ್ರಮದ ಜತೆಗೆ ಆತ್ಮವಿಶ್ವಾಸದಿಂದ ಓದಿ ಉನ್ನತ ಸಾಧನೆ ಮಾಡಬೇಕು. ಸಾಮಾನ್ಯರೂ ಉನ್ನತ ಸಾಧನೆ ಮಾಡಬಹುದು. ಸ್ವಾಭಿಮಾನ, ಆತ್ಮವಿಶ್ವಾಸದಿಂದ ಓದಿ, ಉನ್ನತ ಹುದ್ದೆ ಗಳಿಸಿ ಭವ್ಯ ಭಾರತವನ್ನು ಕಟ್ಟಲು ಮುಂದಾಗಿ ಎಂದು ಸಲಹೆ ನೀಡಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಬಡತನ ಹಾಗೂ ಅಂಧಕಾರವನ್ನು ಶಿಕ್ಷಣದಿಂದ ಮಾತ್ರ ಹೋಗಲಾಡಿಸಲು ಸಾಧ್ಯ. ಈ ಸಂಸ್ಥೆಯಲ್ಲಿ ತರಬೇತಿ ಹೊಂದಿದವರು ಉನ್ನತ ಅಧಿಕಾರಿಗಳಾಗಿದ್ದಾರೆ. ಮುಂದೊಂದು ದಿನ ನೀವೂ ಅವರ ಸಾಲಿನಲ್ಲಿ ನಿಲ್ಲಬೇಕು ಎಂಬುದು ನಮ್ಮ ಬಯಕೆ ಎಂದರು.
ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಲಕ್ಷ್ಮೀಪುರಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಎಂ. ಸುರೇಶ್ ಹಾಗೂ ಎಂ. ಪೂಜಾ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್. ಎಂ. ರಾಜಶೇಖರ್, ಜ್ಞಾನಬುತ್ತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿಎಚ್. ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಎನ್. ಎಂ. ಸುರೇಶ್, ಉಪಪ್ರಾಂಶುಪಾಲ ಎನ್. ಎಸ್. ಪಶುಪತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಸತ್ಯ, ರಮಾನಂದ್, ತಿಮ್ಮರಾಜು, ಎ.ಎಲ್. ಉಮೇಶ್, ಶಿವಪ್ರಕಾಶ್, ಎನ್. ಎಂ. ಚಂದ್ರಶೇಖರ್ ಬಾಬು, ಎಸ್. ಎಂ. ಕಾಳಿಪ್ರಸಾದ್, ಡಾ.ಎಸ್.ಬಿ.ಎಂ. ಪ್ರಸನ್ನ ಇತರರು ಇದ್ದರು.