ಜಿಲ್ಲೆ

ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ಧ - ಎಂಡಿ ಮಹಾಂತೇಶ ಬೀಳಗಿ - ಕುಂದು ಕೊರತೆ ಸಭೆ

ದಾವಣಗೆರೆ: ಸರ್ಕಾರದ ಸೂಚನೆಯಂತೆ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ಧವಾಗಿದ್ದು, ಮಳೆಯ ಕೊರತೆ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಬೆಸ್ಕಾಂ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಿಂದ ರೈತರು ಜೂನ್ ತಿಂಗಳಿಂದಲೂ ಪಂಪ್‌ಸೆಟ್‌ಗಳ ಮೇಲೆ ಅವಲಂಬಿತವಾಗಿದ್ದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸಬೇಕಾಗಿದೆ. ಇದನ್ನು ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖಾನೆಗಳು, ಯು.ಪಿ.ಸಿ.ಎಲ್, ಪವನ ವಿದ್ಯುತ್ ಯಂತ್ರಗಳ ಮೂಲಕ ಕರೆಂಟ್ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೇಸಿಗೆ ಆರಂಭವಾಗುತ್ತಿದ್ದು ಈ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗುವ ಹಿನ್ನೆಲೆಯಲ್ಲಿ ಸಾವಿರ ಮೆಗಾವಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು. ಈ ಬಗ್ಗೆ ಯಾರಲ್ಲೂ ಆತಂಕ ಬೇಡ ಎಂದರು.

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಭರವಸೆಯಿಂದ ರೈತರು ಬಿತ್ತನೆ ಮಾಡಿದ್ದು, ಎಷ್ಟು ತಾಸು ಪೂರೈಕೆಯಾಗಲಿದೆ ಎಂದು ನಿಖರವಾಗಿ ತಿಳಿಸಿದಲ್ಲಿ ಅದನ್ನು ಆಧರಿಸಿ ಬೆಳೆ ಬೆಳೆಯುತ್ತಾರೆ ಎಂದರು. ಮುಂದಿನ ದಿನಗಳಲ್ಲಿ 7 ತಾಸು ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ಧವಾಗಿದೆ ಎಂದು ಎಂ.ಡಿ ಉತ್ತರಿಸಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ನವಿಲೇಹಾಳ್‌ನಲ್ಲಿ ಕಳೆದ 10 ದಿನಗಳಿಂದ ಸುಟ್ಟ ಟಿಸಿ ಬದಲಾವಣೆ ಮಾಡಿಲ್ಲ ಎಂದರು.

ಟಿ.ಸಿ.ಬ್ಯಾಂಕ್‌ನಲ್ಲಿ 150 ಟಿಸಿಗಳು ದಾಸ್ತಾನಿದ್ದರೂ ಬದಲಾಯಿಸದಿರಲು ಕಾರಣವೇನು ಎಂದು ಬೆಸ್ಕಾಂ ಎಇಇಗೆ ಪ್ರಶ್ನಿಸಿದ ಎಂ.ಡಿ., ಮುಂದಿನ ದಿನಗಳಲ್ಲಿ ಈ ತರಹದ ದೂರು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಸೌರ ಪಂಪ್‌ಸೆಟ್‌ಗೆ ಆದ್ಯತೆ:

ರೈತರ ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆಯನ್ನು 2023ರ ಸೆ. 22ಕ್ಕೆ ನೋಂದಣಿ ಸ್ಥಗಿತಗೊಳಿಸಲಾಗಿದೆ. 500 ಮೀ. ವ್ಯಾಪ್ತಿಯೊಳಗಿನ ಪಂಪ್‌ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಸಕ್ರಮ ಮಾಡಲಾಗುತ್ತದೆ. 500 ಮೀಟರ್‌ಗಿಂತ ಹೆಚ್ಚಿದ್ದಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ ಎಂದರು.

ರೈತರಿಗೆ ಜಾಗೃತಿ ಮೂಡಿಸಿದಲ್ಲಿ ಸ್ವತಃ ಅಳವಡಿಕೆಗೆ ಮುಂದಾಗುವರು ಎಂದು ಶಾಸಕರಾದ ಡಿ.ಜಿ. ಶಾಂತನಗೌಡ ಮತ್ತು ಬಸವಂತಪ್ಪ ತಿಳಿಸಿದರು.

ಅಕ್ರಮ ಸಕ್ರಮಕ್ಕೆ 310 ಕೋಟಿ:

2023ರ ಸೆ. 22ರೊಳಗಾಗಿ ಅಕ್ರಮ ಸಕ್ರಮದಡಿ ನೊಂದಾಯಿಸಿದ ರೈತರ ಪಂಪ್‌ಸೆಟ್‌ಗಳ ಸಕ್ರಮ ಮಾಡಲು ಟೆಂಡರ್ ಕರೆದು ಅನುಮೋದನೆ ನೀಡಿ ಹರಪನಹಳ್ಳಿ ಮತ್ತು ತೆಲಗಿ ಸೇರಿದಂತೆ ಜಿಲ್ಲೆಯಲ್ಲಿ 15615 ಪಂಪ್‌ಸೆಟ್‌ಗಳ ಸಕ್ರಮಕ್ಕಾಗಿ 310 ಕೋಟಿ ರೂ.ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಎಂಡಿ ತಿಳಿಸಿದರು.

ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪಿಸಲು ಮತ್ತು ಈಗಿರುವ ಕೇಂದ್ರಗಳನ್ನು 12.5 ಮೆಗಾವಾಟ್‌ನಿಂದ 20 ಮೆಗಾವಾಟ್‌ಗೆ ಹೆಚ್ಚಿಸಲು ಶಾಸಕರಾದ ಡಿ.ಜಿ. ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಲತಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್, ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನಿಯರ್ ಉಮೇಶ್, ಅಧೀಕ್ಷಕ ಇಂಜಿನಿಯರ್ ಜಗದೀಶ್ ಇದ್ದರು

----