ಜಿಲ್ಲೆ

ನಿರಂತರ ಮಳೆಗೆ ಕುಸಿದ ಮನೆ ಗೋಡೆ

ಕುಶಾಲನಗರ: ನಿರಂತರ ಮಳೆಯಿಂದಾಗಿ ಕುಶಾಲನಗರದ ಟೌನ್ ಕಾಲನಿ ನಿವಾಸಿ ಎಚ್.ಸಿ. ಜಯಪ್ರಕಾಶ್ ಅವರ ಮನೆಯ ಗೋಡೆ ಮಂಗಳವಾರ ಕುಸಿದಿದೆ. ಈ ಸಂದರ್ಭ ಮನೆಯಲ್ಲಿದ್ದ ಮಕ್ಕಳು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಮಾರು 60 ವರ್ಷ ಹಳೆಯ ಮನೆಯಾದ್ದರಿಂದ ನಿರಂತರ ಮಳೆ ಬಿದ್ದ ಕಾರಣ ಮನೆ ಗೋಡೆಗಳು ಸಂಪೂರ್ಣ ಹಾನಿಯಾಗಿ ಕುಸಿದು ಬಿದ್ದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದ ಸಂದರ್ಭ, ಶಿಥಿಲಗೊಂಡಿದ್ದ ಗೋಡೆ ಅಧಿಕಾರಿಗಳ ಎದುರೇ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳೀಯ ವಾರ್ಡ್ ಸದಸ್ಯ ಜಯವರ್ಧನ್ ಮಾತನಾಡಿ, ಕುಶಾಲನಗರದ ಟೌನ್ ಕಾಲನಿಯಲ್ಲಿ ಮಳೆಯಿಂದ ಮನೆಗೆ ಹಾನಿಯಾಗಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮನೆ ವಾಸಿಸಲು ಯೋಗ್ಯವಿಲ್ಲದ ಕಾರಣ ಪುರಸಭೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಸರ್ಕಾರ ಕೂಡ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಆನಂದ್ ಕುಮಾರ್, ಗ್ರಾಮ ಲೆಕ್ಕಿಗ ಸಂತೋಷ್, ಪುರಸಭೆ ಕಂದಾಯ ಅಧಿಕಾರಿ ರಾಮು, ಪುರಸಭೆ ಸಿಬ್ಬಂದಿ ರಾಘವ್, ಧನಂಜಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.