ಜಿಲ್ಲೆ

ನಿರಂತರ ಮಳೆಗೆ ಆರೋಗ್ಯದಲ್ಲಿ ವ್ಯತ್ಯಯ

ಗುಂಡ್ಲುಪೇಟೆ: ಕೆಲ ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ತಾಲೂಕಿನ ಹೆಚ್ಚಿನ ಜನರು ಅನಾರೋಗ್ಯಕ್ಕೊಳಗಾಗುತ್ತಿದ್ದು ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಹಗಲಿನ ವೇಳೆಯಲ್ಲಿ ಅತ್ಯಧಿಕ ಬಿಸಿಲಿನ ತಾಪಮಾನ, ಸಂಜೆ ಹಾಗೂ ಮುಂಜಾನೆ ಶೀತಮಾರುತಗಳಿಂದ ಕೂಡಿದೆ. ದಿಢೀರನೆ ಉಂಟಾಗುವ ಹವಾಮಾನ ವೈಪರೀತ್ಯಗಳಿಂದ ಜನಸಾಮಾನ್ಯರು ಚಳಿಜ್ವರ, ನೆಗಡಿ ಕೆಮ್ಮು ಮುಂತಾದ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ವೃದ್ಧರು ಹಾಗೂ ಮಕ್ಕಳು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಪ್ರತಿ ದಿನವೂ 500-600 ಸಂಖ್ಯೆಯ ರೋಗಿಗಳು ಬರುತ್ತಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 800-900ಕ್ಕೂ ಹೆಚ್ಚಿನವರು ಬರುತ್ತಿದ್ದಾರೆ. ಹೋಬಳಿ ಕೇಂದ್ರಗಳಾದ ತೆರಕಣಾಂಬಿ, ಬೇಗೂರು, ಹಂಗಳ ಹಾಗೂ ಕಬ್ಬಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈರಲ್ ಜ್ವರದಿಂದ ಬಳಲುವ ರೋಗಿಗಳು ತುಂಬಿ ತುಳುಕುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಬೇಗನೆ ಗುಣವಾಗುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳಿಗೆ ಹೋಗುತ್ತಿದ್ದಾರೆ. ಮೊದಲನೇ ದಿನ ತಮ್ಮಲ್ಲಿಗೆ ಬಂದ ರೋಗಿಗಳ ರಕ್ತ ಪರೀಕ್ಷೆಗೆ ಶಿಫಾರಸ್ಸು ಮಾಡುವ ಖಾಸಗಿ ಆಸ್ಪತ್ರೆಗಳು ಅನಗತ್ಯವಾಗಿ ಪ್ರಯೋಗಾಲಯಗಳಿಗೆ ಕಳಿಸಿ ನಾನಾ ಪರೀಕ್ಷೆಗಳನ್ನು ಮಾಡಿಸುವ ಮೂಲಕ ದುಬಾರಿ ಬೆಲೆಯ ಔಷಧಿಗಳನ್ನು ನೀಡಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆಯವರು ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಪಟ್ಟಣದ ನಿವಾಸಿ ಭೈರೇಶ್ ಗಾಣಿಗ್ ಒತ್ತಾಯಿಸಿದ್ದಾರೆ.

ಅಧಿಕ ಪ್ರಮಾಣದ ಡೋಸ್ ಪರಿಸ್ಥಿತಿಯ ಲಾಭಪಡೆಯಲು ಮುಂದಾಗಿರುವ ಖಾಸಗಿ ನರ್ಸಿಂಗ್ ಹೋಮ್‌ಗಳು ರೋಗಿಗಳಿಗೆ ಅಧಿಕ ಪ್ರಮಾಣದ ಡೋಸ್ ಔಷಧಿಗಳನ್ನು ನೀಡುವ ಮೂಲಕ ಜನರ ರೋಗನಿರೋಧಕ ಶಕ್ತಿ ಕುಂದುವಂತೆ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಶೀತ, ನೆಗಡಿಯಿಂದ ಆಸ್ಪತೆಗೆ ಬರುವ ರೋಗಿಗಳಿಗೆ ನಾಲ್ಕಾರು ದಿನಗಳಾದರೂ ಜ್ವರ ಕಡಿಮೆಯಾಗದಿದ್ದರೆ ರಕ್ತಪರೀಕ್ಷೆ, ಮೂತ್ರ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕಾಗಿದ್ದರೂ ಖಾಸಗಿ ನರ್ಸಿಂಗ್ ಹೋಮ್ ಹಾಗೂ ಕ್ಲಿನಿಕ್‌ಗಳಲ್ಲಿ ಮೊದಲನೇ ದಿನವೇ ಆಂಟಿ ಬಯಾಟಿಕ್‌ನಂಥಾ ಮಾತ್ರೆಗಳನ್ನು ಕೊಡುವುದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವೈರಲ್ ಜ್ವರದಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಎರಡು ಮೂರು ದಿನಗಳು ಜ್ವರವಿದ್ದರೂ ಆಂಟಿಬಯಾಟಿಕ್ ನೀಡಬಾರದು ಎಂದಿದೆ. ಆದರೆ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು ಬಿಸಿ ನೀರು ಕುಡಿಯುವುದು, ಬೆಚ್ಚನೆ ವಾತಾವರಣದಲ್ಲಿ ಇರುವುದರಿಂದ ಗುಣಮುಖರಾಗಬಹುದು. ಡಾ.ಮಂಜುನಾಥ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ. ಹವಾಮಾನ ವೈಪರೀತ್ಯದಿಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ವೈರಲ್ ಜ್ವರಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊರೆಯಾಲ, ಹಿರೀಕಾಟಿ, ನೇನೆಕಟ್ಟೆ ಹಸಗೂಲಿ ಮುಂತಾದ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮಾಡಲು ಗ್ರಾಮಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಎಲ್ಲಾ ಗ್ರಾಮಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಶುದ್ದು ಕುಡಿಯುವ್ಚ ನೀರು ಹಾಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಡಾ.ಅಲೀಂ ಪಾಶಾ ತಾಲೂಕು ಆರೋಗ್ಯಾಧಿಕಾರಿ