ಬೆಳಗಾವಿ: ಸತತವಾಗಿ ಸುರಿಯುತ್ತಿರುವ ಮಳೆ, ಜಾನುವಾರುಗಳಿಗೆ ಚರ್ಮ ರೋಗದಿಂದ ರೈತ ಸಮುದಾಯ ಸಂಪೂರ್ಣ ತತ್ತರಿಸಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಸಜ್ಜೆ, ಮೆಕ್ಕೆಜೋಳ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳು ಕೈಗೆ ಬಂದರೂ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ನಾಲ್ಕೈದು ವಾರಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸೆಪ್ಟಂಬರ್ 1ರಿಂದ ಅಕ್ಟೋಬರ್ 18ರ ವರೆಗೆ ವಾಡಿಕೆ ಮಳೆ (522 ಮಿ.ಮೀ)ಗಿಂತ 769 ಮಿಲಿ ಮೀಟರ್ ಮಳೆಯಾಗಿದೆ. ಇದರಿಂದಾಗಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕೃಷಿ ಜಮೀನುಗಳು ಜಲಾವೃತವಾಗಿವೆ. ಮತ್ತೊಂದೆಡೆ ಜಾನುವಾರುಗಳಿಗೆ ಚರ್ಮ ರೋಗ, ಮೇವು ಅಭಾವವದಿಂದಾಗಿ ರೈತರು, ಹೈನುಗಾರರು, ದ್ರಾಕ್ಷಿ, ಕಬ್ಬು ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.
2022-23ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ (ಜೂನ್‌ನಿಂದ ಅಕ್ಟೋಬರ್ 10ರ ವರೆಗೆ) ಸುರಿದ ಧಾರಾಕಾರ ಮಳೆ, ನದಿ, ಹಳ್ಳಕೊಳ್ಳಗಳ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಭತ್ತ-113 ಹೆಕ್ಟೇರ್, ಜೋಳ-18, ಗೋವಿನ ಜೋಳ -9362, ಸಜ್ಜೆ -111, ಹೆಸರು- 19037, ಉದ್ದು - 1435, ಶೇಂಗಾ-1080, ಸೋಯಾ ಅವರೆ- 21699, ಸೂರ್ಯಕಾಂತಿ -654, ಕಬ್ಬು - 2098, ಹತ್ತಿ - 1469, ದ್ರಾಕ್ಷಿ -85 ಸೇರಿ ಸುಮಾರು 87 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳ ಹಾನಿಯಾಗಿದೆ. ಈಗಾಗಲೇ ಸರ್ಕಾರವು ಬೆಳೆಹಾನಿ, ಮನೆಹಾನಿ ಸೇರಿ ಒಟ್ಟು 104 ಕೋಟಿ ರೂ. ಪರಿಹಾರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ.
ಜಿಲ್ಲೆಯಲ್ಲಿ ಅಕ್ಟೋಬರ್ ಎರಡನೇ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಥಣಿ, ಹುಕ್ಕೇರಿ, ಮೂಡಲಗಿ, ಬೆಳಗಾವಿ, ಬೈಲಹೊಂಗಲ, ಖಾನಾಪುರ ತಾಲೂಕುಗಳಲ್ಲಿ ತರಕಾರಿ, ದ್ರಾಕ್ಷಿ, ಹತ್ತಿ, ಮೆಕ್ಕೆಜೋಳ ಗಿಡದಲ್ಲೇ ಕೊಳೆಯುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ವರುಣ ಆರ್ಭಟ ಮುಂದುವರಿದರೆ ರೈತರು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ.
ಜಾನುವಾರುಗಳಿಗೆ ಮೇವು, ರೋಗದ ಕಾಟ: ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಬಹುಪಾಲ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ. ಪರಿಣಾಮ ಜಾನುವಾರುಗಳಿಗೆ ಹಸಿ ಮೇವಿನ ಕೊರತೆಯ ಜತೆಗೆ ಚರ್ಮಗಂಟು ರೋಗ ಕಾಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 650ಕ್ಕೂ ಅಧಿಕ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿದೆ. ಕೆಲವೆಡೆ ಹಸಿ ಮೇವು ಅಭಾವ, ಚರ್ಮದ ರೋಗದಿಂದಾಗಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮತ್ತೊಂದೆಡೆ ಚರ್ಮ ರೋಗ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಜಾನುವಾರು ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಿದ್ದರಿಂದ ರೈತರು ಹಸು, ಎಮ್ಮೆ, ಕುರಿ, ಎತ್ತುಗಳ ಮಾರಾಟ, ಖರೀದಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ವಲ್ಪ ದಿನ ಮಳೆ ಬಿಡುವು ಕೊಟ್ಟರೆ ಅನುಕೂಲವಾಗುತ್ತದೆ. ಮಳೆಯಿಂದಾಗಿ ಆದಾಯ ಸಂಪೂರ್ಣ ಕಡಿಮೆಯಾಗಿದೆ ಎಂದು ಹೈನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.