ಕುಮದ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮವನ್ನು ಡಾ. ಜಿ.ಎಸ್.ಶಿವಕುಮಾರ್ ಉದ್ಘಾಟಿಸಿದರು. ರಾಜು ಜಡಿಯಪ್ಪ, ಡಾ. ವೀರೇಂದ್ರ, ಚಂದ್ರಶೇಖರ್ ಇತರರಿದ್ದರು. 
ಜಿಲ್ಲೆ

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ

ಶಿಕಾರಿಪುರ: ನಿರಂತರ ಪ್ರಯತ್ನ ಮಾಡುವವನು ಸದಾ ಯಶಸ್ವಿಯಾಗುತ್ತಾನೆ. ಪ್ರಯತ್ನ ಮತ್ತು ಪರಿಶ್ರಮ ಯಶಸ್ಸಿನ ಗುಟ್ಟು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಸರಿಯಾಗಿ ಬಳಸಿಕೊಂಡಾಗ ದೇಶ, ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಒತ್ತಡ ರಹಿತ ಕಲಿಕೆ ಯಶಸ್ಸಿನ ದಾರಿದೀಪ. ವಿದ್ಯಾರ್ಥಿಗಳಿಗೆ ಆತ್ಮಚರಿತ್ರೆ ಯಶಸ್ಸಿಗೆ ಪ್ರೇರಣೆ ಎಂದರು.

ಹಿರಿಯ ಉಪನ್ಯಾಸಕ ರಾಜು ಜಡಿಯಪ್ಪ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ವಾಣಿಜ್ಯ ವಿಭಾಗದ ಕೊಡುಗೆ ಅನನ್ಯ. ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ವಯೋನಿವೃತ್ತಿ ಸಹಜವಾಗಿದೆ. ಆದರೆ ವೃತ್ತಿಪರ ಕೋರ್ಸ್‌ಗಳಾದ ಸಿಎ, ಸಿಎಸ್, ಐಸಿಡಬ್ಲುಎ, ಕೋರ್ಸ್‌ಗಳಲ್ಲಿ ಜೀವನ ಪರ್ಯಂತ ಮುಕ್ತ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ನಿರ್ದಿಷ್ಟ ಉದ್ದೇಶ, ಗುರಿಗಳೊಂದಿಗೆ ಆತ್ಮಸ್ಥೆರ್ಯದ ಮೂಲಕ ಸದೃಢ ಮನಸ್ಸಿನಿಂದ ಉಪನ್ಯಾಸಕರ ಮಾರ್ಗದರ್ಶನ ಪಡೆದು ವಿಚಾರಗಳನ್ನು ತಿಳಿದುಕೊಂಡು ನಿರಂತರ ಕೃಷಿ ಅಭ್ಯಾಸ ಮಾಡಿದಾಗ ಸುಲಭವಾಗಿ ಜಯಗಳಿಸಲು ಸಾಧ್ಯವಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಎಂ.ವೀರೇಂದ್ರ ಮಾತನಾಡಿ, ಮನಸಿದ್ದರೆ ಮಾರ್ಗ ಎನ್ನುವ ನಿಟ್ಟಿನಲ್ಲಿ ತಾವೆಲ್ಲರೂ ಕಾಲೇಜಿನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಚಂದ್ರಶೇಖರ್, ಶಿವರಾಜ್, ಯೋಗರಾಜ್, ಸಂಜೀವ್, ಉಪನ್ಯಾಸಕ ಚಂದ್ರಶೇಖರ್, ದೇವರಾಜ್ ಇತರರಿದ್ದರು.