ಜಿಲ್ಲೆ

ನಿರಂತರ ಪರಿಶ್ರಮದಿಂದ ಉನ್ನತ ಸ್ಥಾನ

ರಾಜು ಯಮಕನಮರಡಿ

ಚಿಟಗುಪ್ಪ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ವಿದ್ಯಾಭ್ಯಾಸದ ಜತೆಗೆ ಗುರುಗಳ ಹಾಗೂ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಪಡೆದು ಗುರಿ ಸಾಧಿಸಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳಿಗೆ ದೇವಸ್ಥಾನವಾಗಿವೆ. ಇಲ್ಲಿ ಪರಿಶ್ರಮದಿಂದ ಶೈಕ್ಷಣಿಕ ಸಾಧನೆ ಮಾಡಿ ಉನ್ನತ ಸ್ಥಾನ ಹೊಂದಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅಗತ್ಯ ಸೌಲಭ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ದಯಾನಂದ ಆಗಸರ ಮಾತನಾಡಿ, ಶಿಕ್ಷಣ ಉದ್ಯಮವಲ್ಲ. ಕೇವಲ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಶಿಕ್ಷಣ ಪಡೆಯದೇ ಶಿಕ್ಷಣದಿಂದ ಜ್ಞಾನ ಪಡೆದು ಸಾಕಷ್ಟು ಸಾಧನೆ ಮಾಡಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹಿಸಬೇಕೆಂದು ಹೇಳಿದರು.

ಪ್ರಾಂಶುಪಾಲ ಡಾ.ಜಯಕುಮಾರ ಶಿಂಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಸ್‌ಐ ಬಾಶುಮಿಯ, ಪ್ರೊ.ವೀರಶೆಟ್ಟಿ ಮೈಲೂರಕರ ಮಾತನಾಡಿದರು.

ಪ್ರಮುಖರಾದ ಶಾಂತಕುಮಾರ ಪಾಟೀಲ್, ಚಿತ್ರಶೇಖರ ಚಿರಳ್ಳಿ, ಡಾ.ಕೆ.ಶಿವಕುಮಾರ, ಡಾ. ಸತೀಶಕುಮಾರ ಡೋಂಗ್ರೆ, ರಮೇಶ ಬಿರಾದಾರ ಇತರರಿದ್ದರು.

ಕಳೆದ ಸಾಲಿನಲ್ಲಿ ಕ್ರೀಡೆ, ಪ್ರಬಂಧ, ವಿಷಯ ಮಂಡನೆ ಮುಂತಾದ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.