ಚಿಕ್ಕೋಡಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಬಹಳ ಮುಖ್ಯವಾಗಿದೆ. ನಿರಂತರ ಅಧ್ಯಯನ ಹಾಗೂ ಗುರಿಯಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಎಸ್‌ಬಿ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಹೇಳಿದರು.
ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಈಚೆಗೆ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ವಿದ್ಯಾರ್ಥಿಗಳ ತಯಾರಿ ಕಾರ್ಯಾಗಾರದಲ್ಲಿ ಮಾತನಾಡಿದರು. ನಿರಂತರ ಅಧ್ಯಯನದಿಂದ ನಿಗದಿತ ಸಮಯದೊಳಗೆ ನಿಶ್ಚಿತ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸಾಧನೆ ಮಾಡಬೇಕು ಎಂದರು.
ವಿಶ್ರಾಂತ ಪ್ರಾಚಾರ್ಯ ಡಾ. ಎಂ.ಟಿ.ಕುರಣಿ ಮಾತನಾಡಿ, ಇಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಕೆಗೆ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯಗಳು ಇದ್ದರೂ, ಪ್ರಯತ್ನಶೀಲರಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಹುದ್ದೆ ತಲುಪುವಲ್ಲಿ ಹಿಂದೆ ಬೀಳುತ್ತಿರುವುದು ಆತಂಕಕಾರಿ ಎಂದರು. ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಸಕಾರಾತ್ಮಕ ಯೋಚನೆಯಿಂದ ಅಧ್ಯಯನ ಕೈಗೊಂಡರೆ ಯಶಸ್ಸು ಒಲಿಯಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಬಿ.ಜಿ. ಕುಲಕರ್ಣಿ ಮಾತನಾಡಿ, ವೇಳಾ ಪಟ್ಟಿಯೊಂದಿಗೆ ಶಿಸ್ತುಬದ್ಧ ಅಧ್ಯಯನ ಮಾಡಿದರೆ ಎಲ್ಲ ಪರೀಕ್ಷೆಗಳಲ್ಲೂ ಸಫಲತೆ ಕಾಣಬಹುದು ಎಂದರು. ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಎಸ್.ಎಂ. ಪಾಟೀಲ, ಶಾಂತಿನಾಥ ಲಠ್ಠೆ, ಪ್ರವೀಣ ವಾಗ್ಮರೆ, ತೇಜಸ್ವಿನಿ ಜೋಡಟ್ಟಿ, ಸಂಗೀತ ಚಾಗಲಾ, ಎಂ.ಆರ್. ಛಾಯಾ ಇತರರಿದ್ದರು.