ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಟ್‌ನಲ್ಲಿ ೧೬೫ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ವೇದಾಂತ ಹಣಮಂತ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶಶಿಧರ ಕೋಸಂಬೆ, ಬಸವರಾಜ ಮೊಳಕೀರೆ, ರಾಜು ಜಬುರೆ ಇತರರಿದ್ದರು. 
ಜಿಲ್ಲೆ

ನಿರಂತರ ಅಧ್ಯಯನ ಸಾಧನೆಗೆ ಸಹಕಾರಿ

ಭಾಲ್ಕಿ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೈಗೂಡಿಸಿಕೊಂಡರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ಹೀಗಾಗಿ ಕಲಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅನುಭವ ಮಂಟಪ ಟ್ರಸ್ಟ್​ನ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಟ್‌ನಲ್ಲಿ ರಾಷ್ಟç ಮಟ್ಟದಲ್ಲಿ ೧೬೫ನೇ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿ ವೇದಾಂತ ಹಣಮಂತ ಲಕಡೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ, ನಿರ್ದಿಷ್ಟ ಗುರಿ ಹಾಗೂ ಅದಕ್ಕೆ ಪೂರಕ ಪ್ರಯತ್ನ ಇದ್ದರೆ ಯಶಸ್ಸು ಸಾಶಿಸಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ವಿದ್ಯಾರ್ಥಿ ವೇದಾಂತ ಉತ್ತಮ ಉದಾಹರಣೆ ಆಗಿದ್ದಾರೆ ಎಂದರು.

ಎರಡು ವರ್ಷ ಪಿಯುಸಿ ಶಿಕ್ಷಣದ ಜತೆಗೆ ನೀಟ್ ತರಬೇತಿಯಲ್ಲಿ ಉತ್ತಮ ಅಧ್ಯಯನ ಮೈಗೂಡಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ೧೬೫ನೇ ರ‍್ಯಾಂಕ್ ಪಡೆದು ಗಡಿ ಜಿಲ್ಲೆ ಬೀದರ್‌ನ ಕೀರ್ತಿಯನ್ನು ವೇದಾಂತ ರಾಷ್ಟ್ರವ್ಯಾಪಿ ಪಸರಿಸಿದ್ದಾರೆ. ಮುಂದೆಯೂ ಉತ್ತಮ ಶಿಕ್ಷಣ ಪಡೆದು ಕಲಿತ ಸಂಸ್ಥೆ ಮತ್ತು ಪಾಲಕರಿಗೆ ಗೌರವ ತಂದು ಕೊಡುವ ಕೆಲಸ ಮಾಡಲಿ ಎಂದು ಹಾರೈಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಡಿಭಾಗದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕಟ್ಟಿದ ವಿದ್ಯಾ ಸಂಸ್ಥೆಯಿಂದ ವಿದ್ಯಾರ್ಥಿಗಳು ಸಾಧಕರಾಗಿ ರಾಜ್ಯ, ರಾಷ್ಟ್ರ  ಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನ ನಿರ್ದೇಶಕ ಶಶಿಧರ ಕೋಸಂಬೆ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಸಾಹಿತಿ ರಾಜು ಜುಬರೆ, ಹಣಮಂತ ಲಕಡೆ, ಸ್ಮಿತಾ ಹಣಮಂತ ಇತರರಿದ್ದರು.

ಗ್ರಾಮೀಣ ಭಾಗದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ನುರಿತ ಬೋಧಕರನ್ನು ನಿಯೋಜಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಕಲ್ಪಿಸಿ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನದ ಪೀಠಾಧಿಪತಿ