ಜಿಲ್ಲೆ

ನಿರಂತರ ಅಧ್ಯಯನ ರೂಢಿಸಿಕೊಳ್ಳಬೇಕು

ನಿಪ್ಪಾಣಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೈಪುಣ್ಯತೆಗಳಿಲ್ಲದೆ ಯಶಸ್ಸು ಅಸಾಧ್ಯ. ಆದ್ದರಿಂದ ನಿರಂತರ ಆಧ್ಯಯನ ರೂಢಿಸಿಕೊಳ್ಳುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಕೆಎಲ್‌ಇ ಸಂಸ್ಥೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಫ್.ಪಾಟೀಲ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ವಿಷಯಕ್ಕೂ ತನ್ನದೇ ಆದ ಮೌಲ್ಯವಿದೆ. ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಿಮ್ಮ ಜ್ಞಾನದ ಪಥವನಷ್ಟೇ ಅಲ್ಲದೆ, ಉದ್ಯೋಗ, ಜೀವನಮೌಲ್ಯ ನಿರ್ಧರಿಸುತ್ತವೆ ಎಂದರು.

ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಶ್ರಮ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ, ಸಂಯಮದಿಂದ ಓದಿ, ಮಾನವೀಯ ಮೌಲ್ಯಗಳೊಂದಿಗೆ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ೯ನೇ ಸ್ಥಾನ ಪಡೆದ ಅಥರ್ವ ಧುಮಾಲೆ ಹಾಗೂ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಪಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ ಹಾಗೂ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ ಇತರರಿದ್ದರು. ಶಿವಲಿಂಗ ನಾಯಕ ಪ್ರಾರ್ಥಿಸಿದರು. ಪ್ರಿಂಕಜ್ ಟಾಕಳೆ ಅತಿಥಿಗಳನ್ನು ಪರಿಚಯಿಸಿದರು. ಗೀತಾ ಕಮತೆ ಮತ್ತು ಸುರೇಶ ಶಿಂಗಟೆ ನಿರೂಪಿಸಿದರು. ಅಶ್ವಿನಿ ಕಿಲ್ಲೇದಾರ ವಂದಿಸಿದರು.