ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳು ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಗಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಸಲಹೆ ನೀಡಿದರು.
ಜ್ಞಾನಬುತ್ತಿ ಸಂಸ್ಥೆಯಿಂದ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಎಫ್‌ಡಿಎ, ಎಸ್‌ಡಿಎ, ಪೊಲೀಸ್ ಪೇದೆ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸತತ ಅಧ್ಯಯನವೇ ಮದ್ದು. ಯಾವುದೇ ಅಡ್ಡದಾರಿಯಿಂದ ಯಶಸ್ಸು ಸಾಧ್ಯವಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಗೈಡ್‌ಗಳ ಬದಲಾಗಿ ಪಠ್ಯಪುಸ್ತಕಗಳನ್ನು ಹೆಚ್ಚು ಓದಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಾ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕಡಿಮೆ ಅವಧಿಯಲ್ಲಿಯೇ ಉದ್ಯೋಗ ಪಡೆಯುತ್ತೇನೆ ಎನ್ನುವ ಆಕಾಂಕ್ಷೆ ಇಟ್ಟುಕೊಳ್ಳಬಾರದು. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಒಂದೊಮ್ಮೆ ಅನುತ್ತೀರ್ಣಗೊಂಡರೂ ಯಾವುದೇ ಕಾರಣದಿಂದಲೂ ಎದೆಗುಂದದೆ ಅಧ್ಯಯನ ನಿಲ್ಲಿಸದೆ ಮುಂದುವರಿಸಬೇಕು. ಒಂದಲ್ಲ ಒಂದು ಉದ್ಯೋಗ ಪಡೆದೆ ಪಡೆಯುತ್ತೇನೆ ಎಂಬ ಛಲದಿಂದ ನಿರಂತರ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಕಳೆದ 35 ವರ್ಷಗಳಿಂದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಗೂ ಇತರರು ಅಭ್ಯರ್ಥಿಗಳಿಗೆ ಉಚಿತ ತರಬೇತಿ ಆಯೋಜನೆ ಮಾಡುತ್ತಾ ಸಲ್ಲಿಸುತ್ತಿರುವ ಸೇವೆ ಅನನ್ಯ ಎಂದು ತಿಳಿಸಿದರು.
ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡದೆ ವಿವಿಧ ಕನ್ನಡ ಲೇಖಕರ ಉತ್ತಮ ಪುಸ್ತಕಗಳನ್ನು ಓದುವ ಜತೆಗೆ ಮನಸ್ಸನ್ನು ಸಂತೋಷಪಡಿಸಿಕೊಳ್ಳುತ್ತಾ ಮುಂದುವರಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಆರಂಭಿಸುವ ಅಭ್ಯರ್ಥಿಗಳಿಗೆ ಮೊದಮೊದಲು ತರಬೇತಿ ತುಂಬಾ ಉಪಯೋಗವಾಗುತ್ತದೆ. ಕೋಚಿಂಗ್ ಪಡೆದ ನಂತರ ತಾವು ತಮ್ಮ ಸ್ವಅಧ್ಯಯನದ ಮೂಲಕ ಯಶಸ್ಸು ಪಡೆಯಬೇಕು ಎಂದರು.
ಅಖಿಲ ಭಾರತ ವಯಸ್ಕರ ಶಿಕ್ಷಣ ಪರಿಷತ್ತಿನ ನಿರ್ದೇಶಕ ವೈ.ಎನ್.ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಡಾ.ನಾಗಾಚಾರಿ, ಡಾ.ಉಮೇಶ್ ಬೇವಿನಹಳ್ಳಿ, ಡಾ. ಹೇಮಚಂದ್ರ, ಡಾ. ಕೃಷ್ಣಕುಮಾರ್, ಕಿರಣ್ ಕೌಶಿಕ್, ಉಮಾ ನಾಗೇಂದ್ರ ಇತರರು ಇದ್ದರು.