ಎನ್.ಆರ್.ಪುರ ತಾಲೂಕು ಶೀಗುವಾನಿಯಲ್ಲಿ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಡಾ. ಆಕರ್ಷ ಮಾಹಿತಿ ನೀಡಿದರು. ಎಲ್.ಎನ್.ದರ್ಶನ್, ಪವನ್ಕರ್, ಪ್ರದೀಪ್, ಗಂಗಮ್ಮ, ಅಶ್ವಿನಿ, ಪ್ರತಿಮಾ, ಉಷಾ ಇದ್ದರು.  
ಜಿಲ್ಲೆ

ನಿಯಮಿತ ಚಿಕಿತ್ಸೆಯಿಂದ ಕ್ಷಯ ನಿವಾರಣೆ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ತಾಲೂಕಿನಲ್ಲಿ ಮಂಗನ ಕಾಯಿಲೆ 14 ಪ್ರಕರಣಗಳು ಕಂಡುಬಂದಿದ್ದು, ಎಲ್ಲ ರೋಗಿಗಳು ಆರೋಗ್ಯವಾಗಿದ್ದಾರೆ. ಮಂಗನ ಕಾಯಿಲೆ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಲಕ್ಷಣ ಆಧಾರಿತ ಚಿಕಿತ್ಸೆ ಮಾತ್ರ ನೀಡಲಾಗುತ್ತದೆ. ಕಾಯಿಲೆ ನಿರ್ಲಕ್ಷಿಸಿದರೆ ಅಪಾಯ ಹೆಚ್ಚು ಎಂದು ಡಾ. ಆಕರ್ಷ ಹೇಳಿದರು.

ಶುಕ್ರವಾರ ಶಿಗುವಾನಿ ಸಮುದಾಯ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಹಾಗೂ ಶಾಂತಿ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೋಂಕಿತ ಉಣುಗು ಮನುಷ್ಯನಿಗೆ ಕಚ್ಚುವುದರಿಂದ ರೋಗ ಹರಡುತ್ತದೆ. ಜ್ವರ, ವಾಂತಿ, ಮೈಕೈನೋವು, ಸುಸ್ತು, ಹಸಿವಾಗದೆ ಇರುವುದು, ವಸುಡು ಮತ್ತು ಮಲದಲ್ಲಿ ರಕ್ತಸ್ರಾವ ಕಂಡುಬರುವುದು ಪ್ರಮುಖ ಲಕ್ಷಣ. ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರಿಶೀಲನೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಮಾಹಿತಿ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಜನರಿಗೆ ಅನುಕೂಲಕರವಾಗಿದೆ. ಪೋಷಕಾಂಶಗಳ ಕೊರತೆಯಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಇದರಿಂದ ಮಹಿಳೆಯರಲ್ಲಿ ರಕ್ತಹೀನತೆ, ಪದೇ ಪದೆ ಗರ್ಭಪಾತವಾಗುತ್ತದೆ. ಮೂಳೆಗಳ ಬೆಳವಣಿಗೆಯಲ್ಲಿ ಕುಂಠಿತವಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ತಾಲೂಕು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ಮಾತನಾಡಿ, ಕ್ಷಯ ಸಾಂಕ್ರಾಮಿಕ ರೋಗ. ಮೈಕ್ರೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯೂಲೆಯ್ ಎಂಬ ರೋಗಾಣುವಿನಿಂದ ಹರಡುತ್ತದೆ. ಗಾಳಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕ್ಷಯ ಪತ್ತೆ ಆಂದೋಲನ ನಡೆಯುತ್ತಿದೆ. ರೋಗ ಕಂಡುಬಂದಲ್ಲಿ ಆರು ತಿಂಗಳ ಕಾಲ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ರೋಗಿಯ ಪೋಷಕಾಂಶ ಹೆಚ್ಚಿಸಲು ಆರು ತಿಂಗಳು ಚಿಕಿತ್ಸೆ ಪೂರ್ಣವಾಗುವವರೆಗೂ ಮಾಸಿಕ 500 ರೂ. ಸರ್ಕಾರದಿಂದ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ತಾಲೂಕಿನ ವಿಚಕ್ಷಣ ಅಧಿಕಾರಿ ಪ್ರದೀಪ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಮಾಹಿತಿ ನೀಡಿದರು.

ಗಂಗಮ್ಮ , ಸೇವಾಪ್ರತಿನಿಧಿ ಅಶ್ವಿನಿ, ಶಾಂತಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪ್ರತಿಮಾ, ಜ್ಞಾನ ವಿಕಾಸ ಮೇಲ್ವಿಚಾರಕಿ ಉಷಾ, ಶಾಂತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಇದ್ದರು.