ಜಿಲ್ಲೆ

ನಿಯಮಬಾಹಿರವಾಗಿ ಕಲ್ಲು ಸಾಗಣೆ, ಟಿಪ್ಪರ್‌ಗಳು ವಶಕ್ಕೆ

ಗುಂಡ್ಲುಪೇಟೆ: ಕೇರಳಕ್ಕೆ ನಿಯಮಬಾಹಿರವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ರಸ್ತೆಗಳಲ್ಲಿ ಟಿಪ್ಪರುಗಳು ನಿಯಮ ಬಾಹಿರವಾಗಿ ಕಲ್ಲು ಸಾಗಣೆ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರ ಸೂಚನೆ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ಹಾಗೂ ಸಿಬ್ಬಂದಿ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್‌ಗಳ ದಾಖಲೆಗಳನ್ನು ಪರಿಶೀಲಿಸಿದರು.

ಪಟ್ಟಣದ ಮಾರ್ಗವಾಗಿ ಕೇರಳಕ್ಕೆ ಕಲ್ಲು ಮತ್ತು ಎಂ.ಸ್ಯಾಂಡ್ ಸಾಗಿಸುತ್ತಿದ್ದ 15 ಟಿಪ್ಪರುಗಳ ದಾಖಲೆಗಳನ್ನು ಪರಿಶೀಲಿಸಿದಾಗ 2 ಟಿಪ್ಪರ್‌ಗಳು ಮಾತ್ರ ಕಾನೂನು ಪ್ರಕಾರ ಕಲ್ಲು ಸಾಗಣೆ ಮಾಡುತ್ತಿದ್ದವು. ಇನ್ನುಳಿದ 13 ವಾಹನಗಳು ಹೆಚ್ಚು ತೂಕದ ಕಲ್ಲು ಸಾಗಣೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಗುಂಡ್ಲುಪೇಟೆ ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ. ಅವರು ವಿಧಿಸಿದ ದಂಡ ಪಾವತಿಸಿದ ನಂತರ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.