ಜಿಲ್ಲೆ

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

ಬೇಲೂರು: ಪುರಸಭೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.
ಪುರಸಭೆ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಬೀದಿಬದಿ ಹಾಗು ತಳ್ಳುಗಾಡಿ ವ್ಯಾಪಾರಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ಬೇಲೂರು ವಿಶ್ವ ವಿಖ್ಯಾತ ಪ್ರವಾಸಿ ತಾಣ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಬೀದಿಬದಿ, ತಳ್ಳು ಗಾಡಿಯವರಿಂದ ಕಸ ಹೆಚ್ಚಾಗಿದೆ. ಇದು ಮುಂದುವರಿದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೀದಿ ಬದಿ ವ್ಯಾಪಾರಿಗಳಿಂದ ಕಸ ಹೆಚ್ಚಾಗಿದೆ ಎಂಬ ದೂರಿನ ಹಿನ್ನೆಯಲ್ಲಿ ಸಭೆ ಕರೆದು ಚರ್ಚಿಸಿ ಸೂಚನೆ ನೀಡುತ್ತಿದ್ದೇನೆ. ಪಟ್ಟಣದಲ್ಲಿ 317 ಬೀದಿ ಬದಿಯ ವ್ಯಾಪಾರಿಗಳು ಇದ್ದಾರೆ.
ಇದರಲ್ಲಿ 117 ಜನ ಮಾತ್ರ ಪುರಸಭೆಯಿಂದ ಗುರುತಿನ ಚೀಟಿ ಪಡೆದು ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಜ್ಯೂನಿಯರ್ ಕಾಲೇಜು ಅವರಣದಲ್ಲಿರುವ ಬಹುತೇಕ ವ್ಯಾಪಾರಸ್ಥರು ಟಾರ್ಪಲ್ ಕಟ್ಟಿಕೊಂಡು ವ್ಯಾಪಾರ ಮಾಡುತ್ತ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ.
ದೇಗುಲ ರಸ್ತೆ, ಹರ್ಡಿಕರ್ ವೃತ್ತ, ಕೆಂಪೇಗೌಡ ವೃತ್ತ, ನೆಹರು ನಗರ, ಜೆಪಿ ನಗರದಲ್ಲಿಯೂ ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಪುರಸಭೆ ನಿಗದಿ ಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡದೆ ತಮಗಿಷ್ಟ ಬಂದ ಕಡೆ ವ್ಯಾಪಾರ ನಡೆಸುತ್ತಿದ್ದಾರೆ. ತ್ಯಾಜ್ಯವನ್ನು ಅಲ್ಲಿಯೇ ಉಳಿಸುವುದರಿಂದ ಸ್ವಚ್ಛತಾ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಅಗತ್ಯ ಎಂದು ಅವರು ಎಚ್ಚರಿಸಿದರು. ಆರೋಗ್ಯ ನಿರೀಕ್ಷಕರಾದ ಜ್ಯೋತಿ, ಲೋಹಿತ್, ಪುರಸಭೆ ಸಿಬ್ಬಂದಿ ಪುಷ್ಪ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು ಹಾಜರಿದ್ದರು.