ಜಿಲ್ಲೆ

ನಿಯಮ ಪ್ರಕಾರ ಭೂಮಿ ಹಂಚಿಕೆ: ಬಗರ್​ ಹುಕಂ ಸಮಿತಿ ಸಭೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಸ್ಪಷ್ಟನೆ

ಕೊರಟಗೆರೆ: ಅನುಭವದಲ್ಲಿ ಇಲ್ಲದವರು, ಸ್ಥಳಿಯರಲ್ಲದವರು, ಜಿಲ್ಲೆಯ ವಿಳಾಸವಿಲ್ಲದವರು ಬಗರ್​ ಹುಕುಂನಲ್ಲಿ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದರೆ ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಬಗರ್​ ಹುಕಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ 4 ಎಕೆರೆ, 5 ಎಕರೆ ಭೂಮಿಗಾಗಿ ಅರ್ಜಿ ಸಲ್ಲಿಸಿರುವವರೇ ಹೆಚ್ಚಾಗಿದ್ದು, ಆದರೆ ಸರ್ಕಾರದ ನಿಯಮ ಪ್ರಕಾರ ಒಂದು ಕುಟುಂಬಕ್ಕೆ 4.38 ಗುಂಟೆ ಜಮೀನು ಮೀರದಂತೆ ಅರ್ಹ ಕುಟುಂಬಕ್ಕಷ್ಟೇ ಭೂಮಿ ನೀಡುವುದಾಗಿ ತಿಳಿಸಿದರು.

ಕೋರ ಹೋಬಳಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬಹುತೇಕ ಅರ್ಜಿಗಳು ಕೆಐಡಿಬಿಗೆ ಹೊಂದಿಕೊಂಡಿದೆ, ಚೆನ್ನರಾಯನ ದುರ್ಗ ಹೋಬಳಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಮೀಸಲು ಅರಣ್ಯ ಪ್ರದೇಶದಲ್ಲಿದೆ, ಕೋಳಾಲ ಹೋಬಳಿಯ ಸಂತೆ ವಡೇರಹಲ್ಲಿ ಸರ್ವೇ ನಂಬರ್​ನಲ್ಲಿ ಹಾಕಿರುವ ಅರ್ಜಿಗಳಲ್ಲಿ ಮೂಲ ವಾಸಿಗಳಲ್ಲದವರು ಸಲ್ಲಿಸಿರುವುದು, ಹೊಳವನಹಳ್ಳಿ ಹೋಬಳಿಯ ಚೆನ್ನವಡೇರಹಳ್ಳಿ ಸರ್ವೇ ನಂಬರ್​ನಲ್ಲಿ ಯಾರೂ ಅನುಭವದಲ್ಲಿ ಇಲ್ಲ ಎನ್ನುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಅನುರ್ಜಿತಗೊಳಿಸಲಾಗಿದೆ. ಸಿ.ಎನ್​.ದುರ್ಗ ಹೋಬಳಿ ಮೀಸಲು ಅರಣ್ಯ ಪ್ರದೇಶದ ಅರ್ಜಿಗಳನ್ನು ಸರ್ಕಾರದ ಹೊಸ ಆದೇಶದಂತೆ ಪುನರ್​ ಪರಿಶೀಲಸಲು ಅಧಿಕಾರಿಗಳು ತಿಳಿಸಿದ್ದು, ಇವನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದೇವೆ, ಮಿಕ್ಕ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ್ದು, ಮುಂದಿನ ಸಭೆಯಲ್ಲಿ ಪುರಸ್ಕರಿಸಲು 44 ಅರ್ಜಿಗಳನ್ನು ಆಯ್ಕೆ ಮಾಡಿರುವುದಾಗಿ ಮಾಹಿತಿ ನೀಡಿದರು.

ಎಲ್ಲಿ ಎಲ್ಲಿ ಎಷ್ಟು ಅರ್ಜಿ ?: ಕೊರಟಗೆರೆ ವಿಧಾನಸಭಾ ೇತ್ರದ ಕೋಳಾಲ ಹೋಬಳಿಯ ಚೆನ್ನವಡೇರಹಳ್ಳಿಯಿಂದ 5, ಹೊಳವನಹಳ್ಳಿ ಹೋಬಳಿ ಸರ್ವೇನಂ. 33ರಲ್ಲಿ 310 ಅರ್ಜಿ, ಸಂತೆ ವಡೇರಹಳ್ಳಿ 11, ಚೆನ್ನರಾಯನ ದುರ್ಗ ಹೋಬಳಿಯ 24, 25, 26 ಸರ್ವೇ ನಂಬರ್​ನಲ್ಲಿ 20 ಕ್ಕೂ ಹೆಚ್ಚು ಅರ್ಜಿ, ಕೋರ ಹೋಬಳಿಯಲ್ಲಿ 19, ಪುರವರ ಹೋಬಳಿಯಲ್ಲಿ 15 ಅರ್ಜಿಗಳು ಸಲ್ಲಿಕೆಯಾಗಿದೆ. ಸಭೆಯಲ್ಲಿ ಕೊರಟಗೆರೆ ತಾಲೂಕು ಬಗರ್​ ಹುಕುಂ ಕಮಿಟಿ ಸದಸ್ಯರಾದ ಸಿ.ಎಸ್​.ಹನುಮಂತರಾಜು, ಡಿ.ಹೇಮಲತಾ, ದೇವರಾಜು, ಅರಣ್ಯ ಇಲಾಖೆ ಸುರೇಶ್​ ಇತರರು ಇದ್ದರು.

ನನ್ನಿಂದ ವಿಳಂಬವಾಗಿಲ್ಲ ಎಂದ ಶಾಸಕ: ಶಾಸಕರು ಬಗರ್​ ಹುಕುಂ ಸಭೆ ಕರೆಯುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದು, ವಾಸ್ತವದಲ್ಲಿ ಕಳೆದ 3 ವರ್ಷದಿಂದ ಸರ್ಕಾರ ಬಗರ್​ ಹುಕಂ ಕಮಿಟಿಯನ್ನೇ ಮಾಡಿಲ್ಲ. ನಾನು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಮಿಟಿ ಮಾಡಿದ್ದಾರೆ. ನಂತರ ಈಗ ಕಮಿಟಿ ಬದಲಾಯಿಸಿದ್ದಾರೆ. ಈಗ ಹೊಸ ಸದಸ್ಯರೊಂದಿಗೆ ಮೊದಲ ಸಭೆ ಮಾಡಿದ್ದು, ಯಾವುದೇ ರೀತಿಯಲ್ಲಿ ನನ್ನಿಂದ ವಿಳಂಬವಾಗಿಲ್ಲ. ಈ ರೀತಿ ಆರೋಪ ಮಾಡುವವರು ಸರಿಯಾಗಿ ಮಾಹಿತಿ ತಿಳಿದು ಆರೋಪಿಸಬೇಕು ಎಂದು ಶಾಸಕ ಪರಮೇಶ್ವರ ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಸಾಗುವಳಿ ಚೀಟಿಗಳನ್ನು ಪರಿಶೀಲಿಸಿ ಅಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ಅರ್ಹರಿಗೆ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ತಾಲೂಕಿನಲ್ಲಿ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ, ಎಲ್ಲವನ್ನೂ ಪರಿಶೀಲಿಸಿ ವಿಲೇವಾರಿ ಮಾಡಿಸುತ್ತೇನೆ. > ಡಾ.ಜಿ.ಪರಮೇಶ್ವರ ಶಾಸಕ