ಶಿರಹಟ್ಟಿ: ಕರೊನಾ ಕಾಟದಿಂದ ಕಂಗೆಟ್ಟು 9 ತಿಂಗಳುಗಳ ಕಾಲ ಬಾಗಿಲು ಮುಚ್ಚಿದ್ದ ಶಾಲೆಗಳು ಇದೀಗ ಅಗತ್ಯ ಮುಂಜಾಗ್ರತೆ ಕ್ರಮಗಳೊಂದಿಗೆ ಶೈಕ್ಷಣಿಕ ಚಟುವಟಿಕೆ ಆರಂಭಿಸಿವೆ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಅವರು ಶಿರಹಟ್ಟಿ, ಮಾಗಡಿ, ಛಬ್ಬಿ, ವರವಿ ಗ್ರಾಮ ಸೇರಿದಂತೆ ತಾಲೂಕಿನ 12 ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಕರೊನಾ ಸೋಂಕು ತಡೆಗಟ್ಟಲು ಶಾಲೆಗಳಲ್ಲಿ ಕೈಗೊಳ್ಳಲಾದ ಕ್ರಮಗಳು, ವರ್ಗ ಕೋಣೆಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಅಂಶಗಳನ್ನು ಗಮನಿಸಿ ಶಿಕ್ಷಕರೊಂದಿಗೆ ರ್ಚಚಿಸಿದರು. ನಂತರ ಪಟ್ಟಣದ ಎ.ಎ. ಪಠಾಣ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಾಲೆಗಳಲ್ಲಿ ಸರ್ಕಾರದ ಸೂಚನೆಯಂತೆ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರು ಕರೊನಾ ಪರೀಕ್ಷೆ ಮಾಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕರೊನಾ ಸೋಂಕು ತಡೆಗೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ನಿರ್ಭಯದಿಂದ ಶಿಕ್ಷಣ ಪಡೆಯಬೇಕು. ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಕುಡಿಯಲು ಮನೆಯಿಂದಲೇ ಬಿಸಿನೀರಿನ ಬಾಟಲ್ ತರಬೇಕು. ಈ ಮೂಲಕ ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದರು.
ಎಸ್ಸೆಸ್ಸೆಲ್ಸಿ ಮಕ್ಕಳು ಪಾಠದ ಕಡೆ ಹೆಚ್ಚಿನ ಗಮನ ಹರಿಸಬೇಕು. ಆನ್ಲೈನ್ ಮೂಲಕ ಪಡೆದ ಶಿಕ್ಷಣದಿಂದ ಏನಾದರೂ ತೊಂದರೆ ಉಂಟಾಗಿದ್ದರೆ ತಕ್ಷಣ ಶಿಕ್ಷಕರೊಂದಿಗೆ ರ್ಚಚಿಸಿ ಪರಿಹರಿಸಿಕೊಂಡು ಕೆಲವೇ ತಿಂಗಳಲ್ಲಿ ಎದುರಾಗುವ ಪರೀಕ್ಷೆಗೆ ಅಣಿಯಾಗಬೇಕು. ಸತತ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದಾಗ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಬಿಇಒ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಆಹಾರ, ನೀರು, ಗಾಳಿಯಷ್ಟೇ ಬದುಕಿಗೆ ಶಿಕ್ಷಣ ಮುಖ್ಯವಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ಅವರನ್ನು ಶಾಲೆಗೆ ಕಳುಹಿಸಬೇಕು. ಈ ಮೂಲಕ ಸರ್ಕಾರದ ಆಶಯ ಈಡೇರಲು ಸಹಕರಿಸಬೇಕು. | ಆರ್.ಎಸ್. ಬುರಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿರಹಟ್ಟಿ