ಜಿಲ್ಲೆ

ನಿಯಮ ಪಾಲಿಸದೆ ಅಪಘಾತ ತಪ್ಪಿಸಲು ಸಾಧ್ಯವಿಲ್ಲ

ಚಾಮರಾಜನಗರ: ರಸ್ತೆ ಸುರಕ್ಷತಾ  ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ  ಬೈಕ್ ಚಾಲನೆ ಮಾಡುವಾಗ ಕಡ್ಡಾಯವಾಗಿ ಎಲಿಮೇಟ್ ಧರಿಸಿ  ಎಂದು  ಸಂಚಾರಿ ಪೊಲೀಸ್ ಠಾಣೆಯ ಸಬ್‌ ಇನ್ಸ್ ಪೆಕ್ಟರ್ ರವಿಕುಮಾರ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ  ರೋಟರಿ ಸಂಸ್ಥೆ ಹಾಗೂ ರೋಟರಿ ಸಿಲ್ಕ್ಸಿಟಿ ಹಾಗೂ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಗುರುವಾರ ಆಯೋಜಿಸಿದ್ದ  ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.
ರಸ್ತೆಯ ಮೇಲೆ ವಾಹನಗಳನ್ನು ಓಡಿಸುವವರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪ್ರತಿಯೊಬ್ಬರು 18 ವರ್ಷದ ನಂತರ ವಾಹನ ಚಾಲನೆ ಪರವಾನಗಿ ಪಡೆದು  ವಾಹನಗಳನ್ನು ಚಾಲನೆ ಮಾಡಬೇಕು. ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನದ ಮಾಲೀಕರು 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಬೇಡಿ, ಅಲ್ಲದೇ ಈ ಸಂದರ್ಭದಲ್ಲಿ ಅಪಘಾತವಾದರೆ, ಯಾವುದೇ ರೀತಿ ಪರಿಹಾರ ದೊರೆಯುವುದಿಲ್ಲ. ಅಪಘಾತಗೀಡಾದ ವ್ಯಕ್ತಿ ಸಾವಿಗೀಡಾದರೆ, ಗಾಯಗೊಂಡರೆ ಮಾಲೀಕನೇ ಪರಿಹಾರ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾ ಕೇಂದ್ರವಾದರೂ ಸಹ ರಸ್ತೆ ಸುರಕ್ಷತೆಗೆ ಅಳವಡಿಸುವ ಮಾರ್ಗಗಳು  ಕಡಿಮೆ, ಕಿರಿದಾದ ರಸ್ತೆಗಳು ಹಾಗೂ ಪುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿರುವುದು, ವಾಹನ ಸವಾರರು ನಿಯಮಗಳನ್ನು ಪಾಲನೆ ಮಾಡದಿರುವುದು  ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈಗಾಗಲೇ  ಪುಟ್‌ಪಾತ್‌ನಲ್ಲಿ ತಮ್ಮ ಅಂಗಡಿಗಳ ಬೋರ್ಡ್ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡಿರುವವರ ವಿರುದ್ದ  ಪ್ರಕರಣ ದಾಖಲು ಮಾಡಿ, ನೋಟೀಸ್ ಜಾರಿ ಮಾಡಿದ್ದೇವೆ ಎಂದರು.
ಇದೇ ವೇಳೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ತಾಲೂಕಿನ ಹಂಡ್ರಕಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ಟ್ರಸ್ಟ್ ಅಧ್ಯಕ್ಷ ಸಿ.ಲಕ್ಷ್ಮಿಕಾಂತ್ ವಿತರಣೆ ಮಾಡಿದರು.
ಸಭೆಯಲ್ಲಿ ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಕಾರ್ಯದರ್ಶಿ ಎಚ್.ಎಂ. ಗುರುಸ್ವಾಮಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ ಚಂದ್ ರವಿ, ಕಾರ್ಯದರ್ಶಿ ಶಮಿತ್‌ಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಮಮತಾ, ರೋಟರಿಯನ್‌ಗಳು ಇದ್ದರು.