ಬೆಳಕವಾಡಿ ಠಾಣೆ ಪಿಎಸ್ ಐ ಅಶೋಕ್ ಎಚ್ಚರಿಕೆ
ಮಳವಳ್ಳಿ: ತಾಲೂಕಿನ ಸಾರಿಗೆ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರಿಗೆ, ಮದ್ಯ ಸಾಗಣೆ ಮತ್ತಿತರ ಅಕ್ರಮ ಚಟುವಟಿಕೆ ನಡೆವುವವರ ವಿರುದ್ಧ ಕಠಿಣ ಕಾನೂರು ಕ್ರಮ ವಹಿಸಲಾಗುತ್ತದೆ ಎಂದು ಪಿಎಸ್ ಐ ಅಶೋಕ್ ಹೇಳಿದರು.
ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಗರಿಕರ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ಅವರು ಮಾತನಾಡಿದರು. ನಾಗರಿಕರು ಕಳ್ಳತನ, ಅಪಘಾತ ಸೇರಿದಂತೆ ಯಾವುದೇ ಸಾರ್ವಜನಿಕ ಸಮಸ್ಯೆಗಳು ಕಂಡು ಬಂದರೂ ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಬೇಕು. ಆಗ ಶೀಘ್ರ ಪರಿಹಾರ ದೊರಕುತ್ತದೆ ಎಂದು ಹೇಳಿದರು.
ಅಪ್ರಾಪ್ತರಿಗೆ ವಾಹನ ಚಲಾಯಿಸಲು ಬೈಕ್ ನೀಡಿದವರಿಗೆ 25, 000 ರೂ. ದಂಡ ಹಾಗೂ ಮಾಲಿಕರಿಗೆ ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ಆದ್ದರಿಂದ ಮಾಲೀಕರು ಮತ್ತೊಬ್ಬರಿಗೆ ವಾಹನ ನೀಡುವಾಗ ಎಚ್ಚರಿಕೆ ವಹಿಸುವಂತೆ ಅವರು ಕಿವಿಮಾತು ಹೇಳಿದರು.
ಕಾನೂನು ಬಾಹಿರ ಘಟನೆಗಳನ್ನು ತುರ್ತಾಗಿ ಇಲಾಖೆ ಗಮನಕ್ಕೆ ತಂದರೆ ಸುವ್ಯವಸ್ಥೆ ಪಾಲನೆಗೆ ತುರ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಗ್ರಾ.ಪಂ.ಸದಸ್ಯ ಚೇತನ್ ಕುಮಾರ್ ಮಾತನಾಡಿ, ಗ್ರಾಮಗಳ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದೆ. ಇದನ್ನು ತಡೆಗಟ್ಟಲು ಮದ್ಯ ಮಾರಾಟಗಾರರ ವಿರುದ್ಧ ಕ್ರಮ ವಹಿಸಿ ಎಂದರು. ಮದ್ಯವನ್ನು ಪೂರೈಸುವ ಬಾರ್ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ವರು ಮನವಿ ಮಾಡಿದರು.