ಜಿಲ್ಲೆ

ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ

ಶಿರಸಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದ ವಿಕಾಸಾಶ್ರಮ ಮೈದಾನದಲ್ಲಿ ಹಾಕಲಾಗಿರುವ ತರಕಾರಿ ದಾಸ್ತಾನು ಸ್ಥಳದಲ್ಲಿ ಚಿಲ್ಲರೆ ವ್ಯಾಪಾರ ನಡೆಸಿದ ವ್ಯಾಪಾರಿಗಳಿಗೆ ಪೊಲೀಸರು ಗಂಭೀರ ಎಚ್ಚರಿಕೆ ನೀಡುವ ಜತೆ ತಕ್ಕಡಿಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ವಿಕಾಸಾಶ್ರಮ ಮೈದಾನದಲ್ಲಿ ಈ ಹಿಂದೆ ವಾರದ ಸಂತೆ ನಡೆಯುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಂತೆ ರದ್ದುಪಡಿಸಿ ಕೇವಲ ತರಕಾರಿ ದಾಸ್ತಾನಿಗೆ ಮಾತ್ರ ಅವಕಾಶ ನೀಡಿತ್ತು. ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಉಲ್ಲಂಘಿಸದಂತೆ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಮಂಗಳವಾರ ಕೆಲವು ವ್ಯಾಪಾರಿಗಳು ನಿರ್ಬಂಧವಿದ್ದ ಸ್ಥಳದಲ್ಲಿ ಇಲಾಖೆ ಸೂಚನೆ ಗಾಳಿಗೆ ತೂರಿ ತರಕಾರಿಯನ್ನು ಗ್ರಾಹಕರಿಗೆ ಮಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಡಿವೈಎಸ್​ಪಿ ಜಿ.ಟಿ.ನಾಯಕ ಹಾಗೂ ಪಿಎಸ್​ಐ ನಾಗಪ್ಪ ಅವರು ಗ್ರಾಹಕರನ್ನು ಚದುರಿಸಿದ್ದಲ್ಲದೆ, ತರಕಾರಿ ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ತಕ್ಕಡಿ ಸಹಿತ ಮಾರಾಟ ಸಾಮಗ್ರಿಗಳನ್ನು ವಶಕ್ಕೆ ಪಡೆದರು. ಅಲ್ಲದೆ, ಇನ್ನು ಮುಂದೆ ಇಲ್ಲಿ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.