ಹಾರೂಗೇರಿ ಪಟ್ಟಣದಲ್ಲಿ ಸಂತೆ ಸ್ಥಳಾಂತರ, ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡುವ ಕುರಿತು ಬುಧವಾರ ಪೊಲೀಸ್ ಇಲಾಖೆ ಹಾಗೂ ಪುರಸಭೆ ವತಿಯಿಂದ ಜಾಗೃತಿ ಮೂಡಿಸಲಾಯಿತು. ಮುಖ್ಯಾಧಿಕಾರಿ ಜಿ.ವಿ.ಹಣ್ಣಿಕೇರಿ, ಠಾಣಾಧಿಕಾರಿ ಯಮನಪ್ಪ ಮಾಂಗ್, ಆರ್.ಆರ್.ಕಂಗನೂಳಿ, ಆರೋಗ್ಯಾಧಿಕಾರಿ ಆರ್.ಡಿ.ಸಣಗೊಂಡ, ಶಂಕರ ಪಾಗೆ, ಮುಬಾರಕ್ ಜಮಾದಾರ ಇತರರು ಇದ್ದರು. 
ಜಿಲ್ಲೆ

ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್

ಬೆಳಗಾವಿ: ಕರೊನಾ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಮದುವೆ ಹಾಗೂ ಮತ್ತಿತರ ನಿಗದಿತ ಸಮಾರಂಭಗಳಿಗೆ ಆಯಾ ತಾಲೂಕು ತಹಸೀಲ್ದಾರ್ ಅನುಮತಿ ನೀಡಲಿದ್ದಾರೆ. ಒಂದು ವೇಳೆ ಅನುಮತಿ ಪಡೆಯದಿದ್ದರೆ ಅಥವಾ ಅನುಮತಿ ಪಡೆದುಕೊಂಡೂ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ಎಚ್ಚರಿಕೆ ನೀಡಿದ್ದಾರೆ.

ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ ಕೆಲವು ಷರತ್ತು ಮೇರೆಗೆ ಅನುಮತಿ ನೀಡಿರುವ ಮದುವೆ, ಮತ್ತಿತರ ಸಮಾರಂಭಗಳಿಗೆ ಮುಂಚಿತವಾಗಿಯೇ ಆಯಾ ತಾಲೂಕು ತಹಸೀಲ್ದಾರ್‌ರಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು ಎಂದು ಅವರು ತಿಳಿಸಿದ್ದಾರೆ.

ಸಂಘಟಕರೇ ಹೊಣೆ: ಅನುಮತಿ ನೀಡುವಾಗ ವಿಧಿಸಲಾಗಿರುವ ಷರತ್ತುಗಳನ್ನು ಸಂಘಟಕರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಷರತ್ತು ಉಲ್ಲಂಘಿಸಿ ಸಮಾರಂಭಗಳಲ್ಲಿ ಹೆಚ್ಚು ಜನರನ್ನು ಸೇರಿಸಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಸೇರಿ ಇತರ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದರೆ ಸಂಘಟಕರು ಮಾತ್ರವಲ್ಲದೆ, ಅಂತಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವ ಕಲ್ಯಾಣ ಮಂಟಪಗಳು, ಛತ್ರಗಳು, ಸಮುದಾಯ ಭವನಗಳ ಮಾಲೀಕರು, ವ್ಯವಸ್ಥಾಪಕರನ್ನೂ ಹೊಣೆ ಮಾಡಲಾಗುವುದು. ಅಲ್ಲದೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿ ನೇಮಕ: ಕರೊನಾ ಮಾರ್ಗಸೂಚಿ ಪ್ರಕಾರ ತಹಸೀಲ್ದಾರರಿಂದ ಅನುಮತಿ ಪಡೆದುಕೊಂಡು ನಡೆಸಲಾಗುವ ಮದುವೆ ಹಾಗೂ ಮತ್ತಿತರ ಸಮಾರಂಭಗಳ ಮೇಲೆ ನಿಗಾ ವಹಿಸಲು ಆಯಾ ತಾಲೂಕುಗಳಲ್ಲಿ ನೋಡಲ್ ಅಧಿಕಾರಿ ನಿಯೋಜಿಸಲಾಗುವುದು. ಒಬ್ಬ ವಿಡಿಯೋಗ್ರಾಫರ್ ಸಮೇತ ಅವರು ನಿಗಾ ವಹಿಸುತ್ತಾರೆ. ಈ ವೇಳೆ ಷರತ್ತುಗಳನ್ನು ಹಾಗೂ ಕರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡಬಂದಲ್ಲಿ ತಕ್ಷಣವೇ ಸಮಾರಂಭಗಳನ್ನು ತಡೆ ಹಿಡಿಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ಎಚ್ಚರಿಕೆ ನೀಡಿದರು.