ಜಿಲ್ಲೆ

ನಿಯಮ ಉಲ್ಲಂಘಿಸಿ ಮದ್ಯದಂಗಡಿಗೆ ಪರವಾನಗಿ ನೀಡಬೇಡಿ; ಕಾಮತಿಕೂಡಿಗೆ ಗ್ರಾಮಸ್ಥರ ಜಿಲ್ಲಾಡಳಿತಕ್ಕೆ ಮನವಿ

ಹಾಸನ: ಆಲೂರು ತಾಲೂಕಿನ ಕಾಮತಿಕೂಡಿಗೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಸಿಎಲ್-7 ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿದ್ದು, ಕೂಡಲೇ ಸ್ಥಳ ಪರಿಶೀಲಿಸಿ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಮದ ಚಂದ್ರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಆಲೂರು ತಾಲೂಕಿನ ಕಾಮತಿಕೂಡಿಗೆಯಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಿದ್ದು, ಅಬಕಾರಿ ನಿರೀಕ್ಷಕರು ಕಾನೂನು ಉಲ್ಲಂಘಿಸುವ ಮೂಲಕ ಸಮಾಜದಲ್ಲಿ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಬಾರದ ರೀತಿಯಲ್ಲಿ ಹಾಸನ ಅಬಕಾರಿ ವಲಯ-2 ರಲ್ಲಿ ಅಬಕಾರಿ ನಿರೀಕ್ಷಕರು ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಬಕಾರಿ ಇಲಾಖೆಯ ಸುತ್ತೋಲೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

ಅಬಕಾರಿ ರೂಲ್-5 ನಿಯಮಕ್ಕೆ ಒಳಪಡುವಂತೆ ಆಲೂರು ತಾಲೂಕಿನ ಕಾಮತಿಕೂಡಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೆ ಸೇರಿದ ಸುಮಾರು 40 ಕುಟುಂಬಗಳು ವಾಸವಾಗಿರುವ ಎ.ಡಿ. ಕಾಲೋನಿಯಿಂದ ಕೇವಲ 130 ಅಡಿ ಅಂತರದಲ್ಲಿ ಖಾಸಗಿಯವರಿಗೆ ಸಿಎಲ್-7 ಮದ್ಯದ ಅಂಗಡಿ ತೆರೆಯಲು ಪ್ರಸ್ತಾವನೆ ಆಯುಕ್ತರಿಗೆ ಸಲ್ಲಿಸಿರುತ್ತಾರೆ. ಸಿಎಲ್-7 ತೆರೆಯಲು ಅವಕಾಶ ನೀಡದಂತೆ ಇದನ್ನು ತಡೆ ಹಿಡಿಯಬೇಕೆಂದು ಹಲವಾರು ಬಾರಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರೂ ಸಹ ಇದನ್ನು ಲೆಕ್ಕಿಸದೆ ವಲಯಾಧಿಕಾರಿ ನಿಯಮಗಳನ್ನು ಉಲ್ಲಂಫಿಸಿ ಕರ್ತವ್ಯ ಲೋಪ ಎಸಗಿದ್ದಾರೆ. ಪ್ರಸ್ತುತ ಸನ್ನದು ಪ್ರಾರಂಭಿಸಲು ಉದ್ದೇಶಿರುವ ಕಟ್ಟಡದಿಂದ 80 ಮೀಟರ್ ಅಂತರದಲ್ಲಿ ಎಸ್.ಸಿ., ಎಸ್.ಟಿ. ಕಾಲೋನಿ ಇದೆ. ರಾಜ್ಯ ಹೆದ್ದಾರಿಯಿಂದ 40 ಮೀಟರ್ ಅಂತರ, ಜಿಲ್ಲಾ ಮುಖ್ಯರಸ್ತೆಯಿಂದ 25 ಮೀಟರ್ ಇದೆ. ಎಲ್ಲವೂ ನಿಯಮ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯ ಬೇರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಸ್ಥಳ ಮರುಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂತೋಷ್, ರಾಜು, ಮಂಜುನಾಥ್, ಜಯಲಕ್ಷ್ಮೀ, ಪಲ್ಲವಿ, ಶಂಕರಪ್ಪ, ತಮ್ಮಯ್ಯ ಮಾದೇಶ್, ರಾಜಯ್ಯ, ಜವರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.