ಜಿಲ್ಲೆ

ನಿಯಂತ್ರಣಾಧಿಕಾರಿ ವಿರುದ್ಧ ನಿರ್ವಾಹಕ ದೂರು

ಕೊಳ್ಳೇಗಾಲ: ಪ್ರಯಾಣಿಕನಿಗೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಏರ್ಪಟ್ಟ ಗಲಾಟೆ ಸಂಬಂಧ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಜೀನಾಮೆ ನೀಡುವಂತೆ ತಿಳಿಸಿದ್ದಾರೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ಘಟಕ ನಿಯಂತ್ರಣಾಧಿಕಾರಿ ವಿರುದ್ಧ ನಿರ್ವಾಹಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮುನಿ ಮಾದಶೆಟ್ಟಿ ಜಿಲ್ಲಾ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ಅವರ ವಿರುದ್ಧ ದೂರು ದಾಖಲಿಸಿದವರು.

ಮೈಸೂರಿನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು 500 ರೂ.ನೀಡಿ ಹಿರಿಯ ನಾಗರಿಕರ ಟಿಕೆಟ್ (63 ರೂ.) ಪಡೆದಿದ್ದರು. ಉಳಿದ ಹಣ ನೀಡಲು ಚಿಲ್ಲರೆ ಇಲ್ಲ ಎಂದು ಕಂಡಕ್ಟರ್ ತಿಳಿಸಿದ್ದಾರೆ. ಇಲ್ಲವಾದಲ್ಲಿ ಸ್ಕ್ಯಾನ್ ಮಾಡುವಂತೆ ಹೇಳಿದ್ದಾರೆ. ಆದರೆ, ಪ್ರಯಾಣಿಕ ಕೊಳ್ಳೇಗಾಲದಲ್ಲಿ ಇಳಿದ ಮೇಲೆ ಕೊಡಿ ಎಂದು ತಿಳಿಸಿದ್ದಾರೆ. ಮಾರ್ಗಮಧ್ಯೆ ಉತ್ತಂಬಳ್ಳಿ ಗ್ರಾಮದ ಬಳಿ ಚಿಲ್ಲರೆ ಹಣ ಕೊಡುವಂತೆ ಕಂಡಕ್ಟರ್ ಅನ್ನು ಪ್ರಯಾಣಿಕ ಕೇಳಿದಾಗ ಇವರಿಬ್ಬರ ನಡುವೆ ವಾಗ್ವಾಗ ನಡೆದಿದೆ.

ಘಟನೆ ಕುರಿತು ಪ್ರಯಾಣಿಕ ದೂರವಾಣಿ ಮುಖಾಂತರ ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್‌ಗೆ ನಿರ್ವಾಹಕರ ವಿರುದ್ಧ ದೂರು ಹೇಳಿದ್ದಾರೆ. ಕೊಳ್ಳೇಗಾಲ ಬಸ್ ಘಟಕಕ್ಕೆ ಅಶೋಕ್ ಕುಮಾರ್ ಅವರು ನನ್ನನ್ನು ಕರೆಸಿಕೊಂಡರು. ಈ ವೇಳೆ ಗಲಾಟೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ, ಪ್ರಯಾಣಿಕನನ್ನು ಕರೆಸಿ ಇಬ್ಬರಿಂದಲೂ ಸರಿಯಾದ ಮಾಹಿತಿ ಪಡೆಯದೆ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ರಾಜೀನಾಮೆ ನೀಡುವಂತೆ ಹೇಳುತ್ತಿದ್ದಾರೆ. ನನಗೆ ನ್ಯಾಯ ಕೊಡಿ ಎಂದ ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.