ಕೂಡ್ಲಿಗಿ: ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಗಣ ವೇಷಧಾರಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಯಂತ್ರಣ ಹೇರಿದಷ್ಟೂ ಅದು ತನ್ನ ಸಂಘಟನೆಯ ಮಹಾವೃಕ್ಷ ವಿಸ್ತರಿಸುತ್ತ ಮುಗಿಲೆತ್ತರಕ್ಕೆ ಬೆಳೆಯುತ್ತದೆ. ಆರ್‌ಎಸ್‌ಎಸ್‌ನಿಂದ ರಾಷ್ಟ್ರಕಟ್ಟುವ ಕಾರ್ಯ ಎಂದಿನಂತೆ ಮುನ್ನಡೆಯಲಿದೆ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಕೀಳು ಮಟ್ಟದ ರಾಜಕಾರಣಕ್ಕೆ ಮುಂದಾಗಿದ್ದು, ಚಿತ್ತಾಪುರ ಕ್ಷೇತ್ರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಆದರೆ, ಆರ್‌ಎಸ್‌ಎಸ್ ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಅಲ್ಲಿಯೇ ಬೃಹತ್ ಪಥ ಸಂಚಲನ ನಡೆಸಲಿದೆ. ಹಿಂದು ವಿರೋಧಿ ಹಾಗೂ ರಾಷ್ಟ್ರ ಪ್ರೇಮದ ವಿರುದ್ಧ ಹೇಳಿಕೆಗಳನ್ನು ನೀಡಿ ಆರ್‌ಎಸ್‌ಎಸ್ ನಿಷೇಧಕ್ಕೆ ಮುಂದಾಗಿರುವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ಸಂತೆ ಮೈದಾನದಿಂದ ಆರಂಭವಾದ 300 ಕ್ಕೂ ಹೆಚ್ಚು ಗಣ ವೇಷಧಾರಿಗಳ ಪಥಸಂಚಲನ ಪಾದಗಟ್ಟೆ ವೃತ್ತ, ಮದಕರಿ ವೃತ್ತದ ಮೂಲಕ ಹಳೆಯ ಸಂತೆ ಮಾರ್ಕೆಟ್, ರಾಮನಗರ, ಲಕ್ಷ್ಮೀ ಬಜಾರ್, ಹಿರೇಮಠ ಕಾಲನಿ ಮೂಲಕ ಹಿರೇಮಠದ ಸಂಸ್ಥಾನ ಆವರಣದಲ್ಲಿ ಸಂಪನ್ನಗೊಂಡಿತು.
ಪಥ ಸಂಚಲನ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದರು. ಗಣವೇಷಧಾರಿಗಳಿಗೆ ಸಾರ್ವಜನಿಕರು ಹೂ ಹಾಕಿ ಸ್ವಾಗತಿಸಿದರು. ಭಾರತ ಮಾತೆ ಹಾಗೂ ಶ್ರೀರಾಮನ ಘೋಷಣೆ ಕೂಗಿದರು.
ಎಸ್ಪಿ ಜಾಹ್ನವಿ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಆರ್ ಎಸ್‌ಎಸ್ ಪ್ರಮುಖರಾದ ಅನಂತ ಪದ್ಮನಾಭ, ಡಾ.ಟಿ.ಎ.ಎಂ.ಶಾಂತಯ್ಯ, ಬಂಡ್ರಿ ವಿಜಯಕುಮಾರ್, ಬಿಜೆಪಿ ಪ್ರಮುಖರಾದ ಬಂಗಾರು ಹನುಮಂತು, ಹೊಂಬಾಳೆ ರೇವಣ್ಣ, ಸಚಿನ್ ಕುಮಾರ್, ಬಿ.ಬಸವರಾಜ, ದಲಿತ ಸಂಘರ್ಷ ಸಮಿತಿ ಮುಖಂಡ ಎಸ್.ದುರುಗೇಶ್, ರಜನಿಕಾಂತ್, ರಾಮು ಕಾಟ್ವಾ, ಬಣಕಾರ ಶಿವಣ್ಣ, ಗ್ಯಾಸ್ ತಿಪ್ಪೇಸ್ವಾಮಿ ಇತರರಿದ್ದರು.