ಹಾಸನ: ಮೇ 10ರಂದು ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಮನವಿ ಮಾಡಿದರು.
ಹಣ ಬಲದಿಂದ ರಾಜಕೀಯ ನಡೆಯುತ್ತಿದೆ. ನಮ್ಮ ಹಾಸನ ಜನತೆ ಯಾವುದೇ ಆಮಿಷಕ್ಕೆ ಒಳಾಗಾಗುವುದಿಲ್ಲ. ಹಾಸನ ವಿಧಾನ ಸಭಾ ಕ್ಷೇತ್ರ ಗುಣಮಟ್ಟದ ಅಭಿವೃದ್ಧಿ ಹೊಂದಲು ಜೆಡಿಎಸ್ ಪಕ್ಷಕ್ಕೆ ನಿಮ್ಮ ಬೆಂಬಲ ಅಗತ್ಯವಾಗಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮತವನ್ನು ನನಗೆ ನೀಡಿ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ಸೋಮವಾರ ಸುದ್ದಿಗೋಷ್ಠಿ ವೇಳೆ ಮನವಿ ಮಾಡಿದರು.
ಬಿಜೆಪಿಯವರು ದೆಹಲಿ ಹೈಕಮಾಂಡ್ ಗುಲಾಮರಾಗಿರುತ್ತಾರೆ. ನನಗೆ ನನ್ನ ಹೈಕಮಾಂಡ್ ದೇವೇಗೌಡರು. ನಾನು ದೇವೇಗೌಡರಿಗೆ ಗುಲಾಮನಾಗಿರುತ್ತೇನೆ. ಗುಲಾಮ ಎನ್ನುವ ಪದ ಬಳಕೆ ಸರಿಯಲ್ಲ. ನಾನು ಹೈಕಮಾಂಡ್ ಹೇಳಿದಂತೆ ಕೇಳಲೇಬೇಕಾಗುತ್ತದೆ. ನನ್ನ ಪಕ್ಷದ ಹಿರಿಯರ ಮಾತಿಗೆ ಬದ್ಧನಾಗಿರುತ್ತೇನೆ. ಹಾಸನ ಜಿಲ್ಲೆ ಅಭಿವೃದ್ಧಿ ಆಗುತ್ತದೆ ಎಂದರೆ ಅದು ಜೆಡಿಎಸ್ ಇದ್ದಾಗಲೇ ಆಗಿರುವುದು. ಆದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದರು.
ಸ್ವರೂಪ್ ತಾಯಿ ಲಲಿತಾ ಮಣಿ ಅವರು ಮಾತನಾಡಿ, ಮೇ 18ರಂದು ಎಚ್.ಡಿ. ದೇವೇಗೌಡರ ಹುಟ್ಟುಹಬ್ಬದ ಇದೆ. ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಹಾಗೂ ಹಾಸನದಲ್ಲಿ ಸ್ವರೂಪ್ ಗೆಲ್ಲಿಸಿಕೊಳ್ಳುವ ಮೂಲಕ ದೇವೇಗೌಡರ ಜನ್ಮದಿನಕ್ಕೆ ಗೆಲುವಿನ ಉಡುಗೊರೆಯನ್ನು ನೀಡೋಣ ಎಂದು ಹೇಳಿದರು.
ನಾಲ್ಕು ಬಾರಿ ಚುನಾವಣೆ ನೋಡಿದ್ದೇವೆ. ಈ ಸಲ ಚುನಾವಣೆಯ ವಾತಾವರಣ ಬದಲಾಗಿದೆ. ಮುಖ್ಯವಾಗಿ ಹಣ ಬೇಕು. ನಮ್ಮಲ್ಲಿ ಹಣ ಇಲ್ಲ. ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇವೆ. ಸಾಮಾನ್ಯ ಕಾರ್ಯಕರ್ತನಾದ ಸ್ವರೂಪ್‌ಗೆ ಜನರು ಹೆಚ್ಚಿನ ಬೆಂಬಲ ನೀಡಿ ಎಂದು ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದರು.
ಜೆಡಿಎಸ್ ಹಿರಿಯ ಮುಖಂಡ ಸ್ವಾಮಿಗೌಡ ಮಾತನಾಡಿ, ಹಾಸನ ಕ್ಷೇತ್ರದ ಅಭಿವೃದ್ಧಿ ಜೆಡಿಎಸ್‌ನಿಂದ ಆಗಿದ್ದು. ಹಣವಂತರನ್ನು ಈ ಕ್ಷೇತ್ರದ ಜನರು ಯಾವುತ್ತೂ ಬೆಂಬಲಿಸಿಲ್ಲ. ಕಳೆದ ಬಾರಿ ಪ್ರೀತಂ ಜೆ ಗೌಡರಿಗೆ ಹಣ ಇರಲಿಲ್ಲ. ಅಧಿಕಾರ ಕೊಟ್ಟರು. ಈಗ ಸಾಕಷ್ಟು ಹಣ ಮಾಡಿಕೊಂಡಿದ್ದಾರೆ. ಮತ್ತೆ ಅವರಿಗೆ ಅಧಿಕಾರ ಕೊಟ್ಟಿದ್ದೆ ಆದರೆ ಇನ್ನೂ ಯಾರಿಗೂ ಅಂಗೈಯಗಲ ಜಾಗವು ಸಿಗುವುದಿಲ್ಲ ಎಂದರು.