ಜಿಲ್ಲೆ

ನಿಮ್ಮ ನಿರ್ಲಕ್ಷ್ಯಕ್ಕೆ ಆಡಳಿತ ಮಂಡಳಿ ಮೇಲೆ ಸಚಿವರು, ಶಾಸಕರ ಟೀಕೆ

ಚಿಕ್ಕಬಳ್ಳಾಪುರ : ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಸಚಿವರು ಮತ್ತು ಶಾಸಕರ ಟೀಕೆಗೆ ಗುರಿಯಾಗಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಗೋವಿಂದಗೌಡ, ಸಾಲ ಮಂಜೂರು ಮಾಡಲು ವಿನಾಕಾರಣ ವಿಳಂಬ, ಇಲ್ಲವೇ ಕಮೀಷನ್ ಪಡೆಯಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ವಿಎಸ್‌ಎಸ್‌ಎನ್, ಪಿಎಸಿಎಸ್ ಹಾಗೂ ಎಸ್‌ಎಫ್‌ಸಿಎಸ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಡ್ಲಘಟ್ಟ ತಾಲೂಕಿನಲ್ಲಿ ರೈತರಿಗೆ 100 ಕೋಟಿ ರೂ. ಗೌರಿಬಿದನೂರು ತಾಲೂಕಿನಲ್ಲಿ 70 ಕೋಟಿ ರೂ.ಗಳ ಕೆಸಿಸಿ ಸಾಲ ನೀಡಲಾಗಿದೆ. ಆದರೆ ಚಿಕ್ಕಬಳ್ಳಾಪುರ ತಾಲೂಕಿನ ರೈತರಿಗೆ ಕೇವಲ 19 ಕೋಟಿ ರೂ. ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಕೇವಲ 25 ಕೋಟಿ ರೂ. ಸಾಲ ನೀಡಿರುವುದು ತೃಪ್ತಿದಾಯಕ ಬೆಳೆವಣಿಗೆಯಲ್ಲ ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಬಡ್ಡಿರಹಿತ ಮತ್ತು ರೈತರಿಗೆ ಕೆಸಿಸಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಿರೀಕ್ಷೆಗೆ ಅನುಗುಣವಾಗಿ ಸಾಧನೆ ಕಂಡು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಎಸ್‌ಎಸ್‌ಎನ್, ಪಿಎಸಿಎಸ್ ಹಾಗೂ ಎಸ್‌ಎಫ್‌ಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯರು ಸುಗಮವಾಗಿ ಹಣಕಾಸಿನ ವ್ಯವಹಾರ ಮಾಡಲು, ಬ್ಯಾಂಕಿಗೆ ಅಲೆದಾಡುವುದನ್ನು ತಪ್ಪಿಸಲು ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದ ಗೋವಿಂದಗೌಡ, ಅರ್ಹರು ಸಾಲ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿದಾಗ ತ್ವರಿತವಾಗಿ ಅನುಮೋದನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಚ್.ಎಸ್.ಮೋಹನ್‌ರೆಡ್ಡಿ, ಕೆ.ಎಸ್.ದ್ಯಾವಪ್ಪ, ಬಿ.ಆರ್.ಅಶ್ವಥಪ್ಪ, ದೊಡ್ಡಮರಳಿ ಪಿಎಸಿಎಸ್ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಜಿ. ಜ್ಯೋತಿ, ಮೇಲ್ವಿಚಾರಕಿ ಕೆ.ಎ.ವಸಂತ ಮತ್ತಿತರರು ಇದ್ದರು.