ಜಿಲ್ಲೆ

ನಿಮ್​ ಸಿಟಿ ಕಸ ನಮ್ಮೂರಿಗೆ ತರಬ್ಯಾಡ್ರಿ...

ಐಮಾಸಪುರ ಬಳಿ ಕೆಜಿಎಫ್​ ನಗರಸಭೆ ಕಸ ವಿಲೇವಾರಿಗೆ ವಿರೋಧ > ಆಯುಕ್ತರಿಗೆ ತರಾಟೆ

ಬಂಗಾರಪೇಟೆ : ಕೆಜಿಎಫ್​ ನಗರಸಭೆ ವತಿಯಿಂದ ತಾಲೂಕಿನ ಐಮಾಸಪುರ ಗ್ರಾಮದ ಸಮೀಪ ನಡೆಯುತ್ತಿದ್ದ ಕಸ ವಿಲೇವಾರಿ ಘಟಕ ಕಾಮಗಾರಿಗೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸದ್ಯಕ್ಕೆ ಕಾಮಗಾರಿ ತಡೆ ಹಿಡಿಯಲಾಗಿದೆ.

ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದಲ್ಲಿ ರಾರ್ಬಟ್​ಸನ್​ಪೇಟೆ ಹೋಬಳಿಯ ಬಂಗಾರದಗಣಿ ಸರ್ವೇ ನಂ.2ರ ಜಾಗದಲ್ಲಿ ರಹಸ್ಯವಾಗಿ ಕಸ ವಿಲೇವಾರಿ ಘಟಕ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಗ್ರಾಮಸ್ಥರು ಹಲವು ದಿನಗಳಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದರು. ಈ ಸಂಬಂಧ ಮಾಹಿತಿ ತಿಳಿದ ಕೆಜಿಎಫ್​ ನಗರಸಭೆ ಆಯುಕ್ತ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

ಕಸ ವಿಲೇವಾರಿ ಘಟಕ ನಿಮಾರ್ಣ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಗಮನಕ್ಕೂ ತರದೆ ರಹಸ್ಯವಾಗಿ ನಡೆಸುವ ಉದ್ದೇಶವೇನು ಎಂದು ಗ್ರಾಮಸ್ಥರು ಕೇಳಿದ ಪ್ರಶ್ನೆಗೆ "ಇದು ಕಸ ವಿಲೇವಾರಿ ಘಟಕವಲ್ಲ, ನಗರಸಭೆ ವಾಹನಗಳನ್ನು ನಿಲ್ಲಿಸಲು ಕಾಮಗಾರಿ ನಡೆಯುತ್ತಿದೆ' ಎಂದು ಆಯುಕ್ತ ಪವನ್​ ಕುಮಾರ್​ ಹೇಳುತ್ತಲೇ ಧ್ವನಿ ಜೋರು ಮಾಡಿದ ಗ್ರಾಮಸ್ಥರು ನಗರಸಭೆ ವಾಹನಗಳನ್ನು ನಿಲ್ಲಿಸಲು ಇಷ್ಟು ದೂರಬರಬೇಕಾ ಎಂದು ಅಧಿಕಾರಿಗಳಿಗೆ ಮಾತಿನಲ್ಲೇ ತಿವಿದರು. ತಾವು ಹೇಳಿರುವಂತೆ ವಾಹನಗಳನ್ನು ನಿಲ್ಲಿಸಲು ಕಾಮಗಾರಿ ನಡೆಯುತ್ತಿದೆ ಎಂದು ಅಧಿಕೃತವಾಗಿ ಹಿಂಬರಹ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದರಿಂದ ಕಚೇರಿಗೆ ತೆರಳಿ ಹಿಂಬರಹ ನೀಡುವುದಾಗಿ ಆಯುಕ್ತರು ಸ್ಥಳದಿಂದ ಹೊರಟು ಹೋದರು.

ಆರೋಗ್ಯದ ಮೇಲೆ ದುಷ್ಪರಿಣಾಮ

ನಿಮಾರ್ಣ ಮಾಡುತ್ತಿರುವ ಕಸ ವಿಲೇವಾರಿ ಘಟಕ ಗ್ರಾಪಂ ವ್ಯಾಪ್ತಿ ಗಡಿಯ 100 ಮೀಟರ್​ ವ್ಯಾಪ್ತಿಯಲ್ಲಿ ಬರುತ್ತದೆ. ದೊಡ್ಡವಲಗಮಾದಿ ಪಂಚಾಯಿತಿ ವ್ಯಾಪ್ತಿಗೆ ಒಳಗೊಂಡಂತೆ ಪೊಲೀಸ್​ ಬೆಟಾಲಿಯನ್​, ತಿಮ್ಮಯ್ಯ ತಾಂತ್ರಿಕ ವಿದ್ಯಾಲಯ ಸೇರಿ ಹಲವು ಗ್ರಾಮಗಳು ಒಳಗೊಂಡಿವೆ. ಹಾಗಾಗಿ ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿದರೆ ಮಾಲಿನ್ಯ ಹದಗೆಟ್ಟು ಗ್ರಾಮಸ್ಥರು ಮತ್ತು ಜಾನವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಆರೋಗ್ಯದ ಹಿತದೃಷ್ಟಿಯಿಂದ ಈ ಭಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬಾರದು ಎಂದು ಸ್ಥಳಕ್ಕೆ ಬಂದಿದ್ದ ಕೆಜಿಎಫ್​ ನಗರಸಭೆ ಆಯುಕ್ತರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ, ಒತ್ತಾಯಿಸಿದರು.

ಅನುಮಾನಾಸ್ಪದ ಕಾಮಗಾರಿ

ವಿವಾದಿತ ಸ್ಥಳದಲ್ಲಿ ಐಮಾಸಪುರ ರಸ್ತೆಗೆ ಲಿಂಕ್​ ಕಲ್ಪಿಸುವ ಬಂಗಾರಗಣಿ ಸರ್ವೇ ನಂ. 2ರಲ್ಲಿ ರಸ್ತೆ ನಿಮಾರ್ಣ ಮಾಡಲಾಗಿದೆ. ಒಳಗಡೆ ವಿಶಾಲ ನಿವೇಶನ ವಿಂಗಡಿಸಿ ಅದರ ಸುತ್ತಲೂ ಅಡಿಪಾಯ ಹಾಕಲು ಅಗೆಯಲಾಗಿದೆ. ಈ ಕಾಮಗಾರಿ ಗಮನಿಸಿದರೆ ವಾಹನಗಳ ನಿಲುಗಡೆಗೆ ಎಂದು ಹೇಳಿರುವ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವುದು ಬೇಡ. ಬಂಗಾರಪೇಟೆ ಮತ್ತು ಕೆಜಿಎಫ್​ ಶಾಸಕರ ಗಮನಕ್ಕೆ ತಂದು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಲಾಗುತ್ತದೆ. | ನಂದಿನಿ ವಿ.ಶೇಷು ಗ್ರಾಪಂ ಅಧ್ಯಕ್ಷೆ, ದೊಡ್ಡವಲಗಮಾದಿ ಕೆಜಿಎಫ್​ ನಗರಸಭೆಯಿಂದ ದೊಡ್ಡವಲಗಮಾದಿ ಗಡಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಕಾಮಗಾರಿ ನಡೆಯುತ್ತಿದೆ. ಗ್ರಾಮಸ್ಥರ ಮತ್ತು ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಕಸ್ತೂರಬಾ ವಿಲೇವಾರಿ ಘಟಕ ನಿಮಾರ್ಣಕ್ಕೆ ವಿರೋಧವಿದೆ. ಮೂರು ದಿನದಲ್ಲಿ ಗ್ರಾಪಂನಲ್ಲಿ ಸಭೆ ಕರೆದು ಕಸ ವಿಲೇವಾರಿ ಘಟಕ ಸ್ಥಾಪನೆಯಾಗದಂತೆ ರ್ನಿಣಯ ಮಾಡಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. | ಮುನಿರಾಜು ಗ್ರಾಪಂಸದಸ್ಯ, ದೊಡ್ಡವಲಗಮಾದಿ