ಚಿತ್ರದುರ್ಗ: ಕಾರ್ಮಿಕ ಕಲ್ಯಾಣ ಮಂಡಳಿ ನಿಧಿಯಲ್ಲಿ ಕಾರ್ಮಿಕರ ಶ್ರಮವಿದೆ. ಆದರೆ, ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಆ ನಿಧಿಯ ಮೇಲೆ ಕಣ್ಣು ಹಾಕುತ್ತಿವೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಕಿಡಿಕಾರಿದರು.
ಹೊಳಲ್ಕೆರೆ ರಸ್ತೆಯ ಸಂಘದ ಕಚೇರಿಯ ಮುಂಭಾಗ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಕಾಯ್ದೆಗೆ ಅನುಗುಣವಾಗಿ ಮಂಡಳಿ ರಚನೆಯಾಗಿದ್ದು, ಸರ್ಕಾರದಿಂದ ಯಾವ ಅನುದಾನವಿಲ್ಲ. ಕಟ್ಟಡ ನಿರ್ಮಾಣದಲ್ಲಿ ಪಾವತಿಸುವ ಸೆಸ್ ಮಂಡಳಿಗೆ ವರ್ಗಾವಣೆಯಾಗುತ್ತದೆ. ಆದರೆ, ಕಾರ್ಮಿಕರ ಹಿತಕಾಯಲು ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿದ ಮಂಡಳಿ ನಿಷ್ಕ್ರಿಯಗೊಳಿಸಲು ಹುನ್ನಾರ ನಡೆಯುತ್ತಿದೆ. ಸೆಸ್ ವಸೂಲಿಗೆ ಆಸಕ್ತಿ ತೋರದೆ, ನಿಧಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕಾರ್ಮಿಕರಿಗೆ ಅಗತ್ಯವಿಲ್ಲದ ಯೋಜನೆಗಳನ್ನು ರೂಪಿಸಿ ಮಂಡಳಿಯ ನಿಧಿಯನ್ನು ಲೂಟಿ ಮಾಡಲಾಗಿದೆ. ಈಗಿರುವ ಕಾಂಗ್ರೆಸ್ ಸರ್ಕಾರವೂ ಅದನ್ನು ಮುಂದುವರಿಸುತ್ತಿದೆ. ರಾಜಕೀಯ ನಾಯಕರಿಗೆ ಕಾರ್ಮಿಕರ ಕುರಿತು ಎಳ್ಳಷ್ಟು ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿ, ವಂಚಿಸಲಾಗುತ್ತಿದೆ. ಉದ್ಯಮಿಗಳು ನಿರ್ಮಿಸುವ ಬೃಹತ್ ಕಟ್ಟಡಗಳಿಂದ ಸೆಸ್ ವಸೂಲಿಗೆ ಕ್ರಮವಹಿಸದೆ, ನಿಧಿ ವೆಚ್ಚಕ್ಕೆ ಮುಂದಾಗಿದೆ. ಮಂಡಳಿ ಉಳಿವಿಗೆ ಹೋರಾಟದ ಅಗತ್ಯವಿದೆ ಎಂದರು.
ಸಂಘದ ಅಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷರಾದ ಕೆ.ಗೌಸ್‌ಪೀರ್, ನಾದಿ ಅಲಿ, ಖಜಾಂಚಿ ಡಿ.ಈಶ್ವರಪ್ಪ, ಚಾಂದ್‌ಪೀರ್, ಮುಖಂಡರಾದ ರಾಜಪ್ಪ, ತಿಮ್ಮಯ್ಯ, ಭರತ್ ಇದ್ದರು.