ಚನ್ನರಾಯಪಟ್ಟಣ: ಪಟ್ಟಣದಲ್ಲೆಲ್ಲ ಶನಿವಾರ ಓಡಾಡಿ ಆತಂಕ ಸೃಷ್ಟಿಸಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ನೀಡಿ ಸೆರೆಹಿಡಿದು ಪಶ್ಚಿಮಘಟ್ಟದ ಕಾಡಿಗೆ ಕರೆದೊಯ್ಯುವಾಗ ಅಂದು ಮೃತಪಟ್ಟಿದೆ.
ಚನ್ನರಾಯಪಟ್ಟಣದ ವಿದ್ಯಾನಗರದಲ್ಲಿ ಸಾರ್ವಜನಿಕರಿಗೆ ತೀವ್ರ ಉಪಟಳ ನೀಡಿದ್ದ ಕಾಡುಕೋಣ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದಾಗಲೇ ಮೃತಪಟ್ಟಿದೆ.
ಶನಿವಾರ ಏಕಾಏಕಿ ಪಟ್ಟಣಕ್ಕೆ ನುಗ್ಗಿ 65 ವರ್ಷದ ಶಾಂತಮ್ಮ ಎಂಬುವರ ಮೇಲೆ ದಾಳಿ ನಡೆಸಿತ್ತು. ಮಾತ್ರವಲ್ಲದೆ ಕಾರು, 3 ಬೈಕ್ ಜಖಂಗೊಳಿಸಿತ್ತು.
ಕಾಡುಕೋಣ ಸೆರೆಗೆ ಕಠಿಣ ಕ್ರಮ ಕೈಗೊಂಡಿದ್ದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿತ್ತು. ಕಾಡುಕೋಣವಿರುವ ಜಾಗಕ್ಕೆ ಸಾರ್ವಜನಿಕರು ಹೋಗದಂತೆ 200 ಮೀಟರ್ ದೂರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಚಿಕ್ಕಮಂಗಳೂರು ಹಾಗೂ ಬನ್ನೇರುಘಟ್ಟದಿಂದ ಬಂದಿದ್ದ ಅರಿವಳಿಕೆ ತಜ್ಞರು ಅರಿವಳಿಕೆ ಚುಚ್ಚುಮದ್ದು ನೀಡಿ ಕಾಡುಕೋಣವನ್ನು ಲಾರಿಗೆ ಹತ್ತಿಸಿದ್ದರು. ಆದರೆ ಇಂಜಿಕ್ಷನ್ ರಿವರ್ಸ್‌ನಿಂದ ಮೃತಪಟ್ಟಿದೆ ಎನ್ನಲಾಗಿದೆ.
ಶನಿವಾರ ಕಾಡುಕೋಣದ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ವರದಿ ಲಭ್ಯವಾಗಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.