ಜಿಲ್ಲೆ

ನಿತ್ರಾಣಗೊಂಡ ಕಾಳಿಂಗ ಸರ್ಪದ ರಕ್ಷಣೆ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ಬಾಯಲ್ಲಿ ಯಾವುದೋ ವಸ್ತು ಸಿಲುಕಿ ಆಹಾರ ಇಲ್ಲದೇ ನಿತ್ರಾಣಗೊಂಡು ಬಿದ್ದಿದ್ದ ಬೃಹತ್ ಕಾಳಿಂಗ ಸರ್ಪವನ್ನು ಭಾನುವಾರ ತಾಲೂಕಿನ ಮುರೇಗಾರ ಬಳಿ ರಕ್ಷಿಸಲಾಗಿದೆ.

ಇಲ್ಲಿನ ಮುರೇಗಾರ ಗ್ರಾಮದ ಮಾದಲಕೋಣೆಯ ಶ್ರೀಪಾದ ಹೆಗಡೆ ಎಂಬುವವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾಳಿಂಗವನ್ನು ರಕ್ಷಣೆ ಮಾಡಲಾಗಿದೆ. 11 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಇದಾಗಿದೆ. ಕೃಷಿ ಜಮೀನಿನಲ್ಲಿ ಕೆಲಸಕ್ಕೆ ಹೋದ ಕೂಲಿಗಾರರು ಕಾಲುವೆಯ ಮಧ್ಯದಲ್ಲಿ ಬಿದ್ದುಕೊಂಡಿದ್ದ ಕಾಳಿಂಗದ ಬಗ್ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಉರಗ ತಜ್ಞ ಪ್ರಶಾಂತ ಹುಲೇಕಲ್ ಸ್ಥಳಕ್ಕೆ ಆಗಮಿಸಿ ಹಾವಿನ ರಕ್ಷಣೆ ಮಾಡಿದ್ದಾರೆ. ಬಾಯಲ್ಲಿ ಏನೋ ಸಿಲುಕಿದ ಕಾರಣ ಆಹಾರ ತಿನ್ನಲು ಆಗುತ್ತಿರಲಿಲ್ಲ. ಈಗ ಅದನ್ನು ತೆಗೆಯಲಾಗಿದ್ದು, ಸಮೀಪದ ಕಾಡಿಗೆ ಬೀಡುತ್ತೇವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇವರಿಗೆ ರಾಜೇಶ ನಾಯ್ಕ ಸಹಕರಿಸಿದರು.