ಕಮಲನಗರ ಗ್ರಾಮೀಣ: ಗ್ರಾಮೀಣ ಭಾಗದ ಮಹಿಳೆಯರು ಮತ್ತು ಗರ್ಭಿಣಿಯರು ನಿತ್ಯ ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಿಣಿ ಮತ್ತು ಮಗು ಆರೋಗ್ಯಯುತವಾಗಿ ಬೆಳೆಯಲು ಸಾಧ್ಯ ಎಂದು ಹೋಳಸಮುದ್ರ ತಾಪಂ ಸದಸ್ಯೆ ಜಯಶ್ರೀ ಪಾಟೀಲ್ ಹೇಳಿದರು.
ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನೆಹರು ಯುವ ಕೇಂದ್ರಗಳ ಆಶ್ರಯಲ್ಲಿ ಆಯೋಜಿಸಿದ್ದ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಪೋಷಣ್ ಶಿಬಿರದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು, ಮಕ್ಕಳನ್ನು ಗುರುತಿಸಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರ ಮೂಲಕ ಆಹಾರ ವಿತರಣೆಗೆ ಸೂಚಿಸಲಾಗಿದೆ ಎಂದರು.
ಹೋಳಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನೀಲಕುಮಾರ ರಾಯಪಳ್ಳಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಗರ್ಭಿಣಿಯರು ಆರೋಗ್ಯವಂತರಾಗಿರಲು ನಿತ್ಯ ಹಸಿ ತರಕಾರಿ, ಕಾಳು ಪಲ್ಯ ಹಾಗೂ ಹಣ್ಣು ಸೇವನೆಯಿಂದ ರಕ್ತ ಹೆಚ್ಚಾಗಿ, ಆರೋಗ್ಯ ಸದೃಢವಾಗಲು ಸಾಧ್ಯ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅಪೌಷ್ಟಿಕತೆ ದಿನೇ-ದಿನೆ ಹೆಚ್ಚುತ್ತಿದೆ. ಇದರಿಂದ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯರಿಂದ ಪೌಷ್ಟಿಕ ಆಹಾರ ಮತ್ತು ಕಬ್ಬಿಣಾಂಶ ಮಾತ್ರೆ ವಿತರಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮೇಲ್ವಿಚಾರಕಿ ವಿಜಯಲಕ್ಷ್ಮೀ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪೋಷಣ್ ಅಭಿಯಾನದ ಸಂಯೋಜಕಿ ಉರ್ಮಿಳಾ, ರಾಜಶ್ರೀ, ಎಸ್ಡಿಎಂಸಿ ಅಧ್ಯಕ್ಷ ಸಂತೋಷ ಬಸನಾಲೆ, ಮುಖ್ಯ ಗುರು ಧನರಾಜ ಮೇತ್ರೆ, ಮೇಲ್ಚಿಚಾರಕಿ ಶೋಭಾವತಿ, ಅಂಗನವಾಡಿ ಕಾರ್ಯಕರ್ತೆ ಪದ್ಮಾ ಸ್ವಾಮಿ, ಸುವಿತಾ , ಸುವರ್ಣ, ಶಿವಗಂಗಾ ಇತರರಿದ್ದರು. ಸುವಿತಾ ಸ್ವಾಗತಿಸಿದರು. ರಾಜಶ್ರೀ ವಂದಿಸಿದರು.