ಬಸವಕಲ್ಯಾಣದ ಜವಾಹರ್ ನವೋದಯ ವಿದ್ಯಾಲಯಕ್ಕೆ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ ನೀಡಿ ಅಡುಗೆ ಕೋಣೆ ಪರಿಶೀಲಿಸಿತು. ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ ಕೆ.ಟಿ. ಇದ್ದರು. 
ಜಿಲ್ಲೆ

ನಿತ್ಯ ತಣ್ಣೀರಿನ ಸ್ನಾನವೇ ಗತಿ

ಬಸವಕಲ್ಯಾಣ: ವಸತಿ ಕಟ್ಟಡದ ಕಂಪೌಂಡನಲ್ಲಿ ಹಾವು, ಚೇಳಿನ ಭಯ, ಸ್ನಾನಕ್ಕೆ ತಣ್ಣೀರೇ ಗತಿ, ಊಟಕ್ಕೆ ಸರಿ ಬೇಯಿಸದ ಚಪಾತಿ. ಇದು ನಾರಾಯಣಪುರ ಜವಾಹರ್ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ಎದುರು ವಿದ್ಯಾರ್ಥಿಗಳು ತೋಡಿಕೊಂಡ ಅಳಲು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ ಕೆ.ಟಿ ಒಳಗೊಂಡ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಕ್ಕಳು ತಮ್ಮ ಸಾಲು ಸಾಲು ಸಮಸ್ಯೆಗಳನ್ನು ತೋಡಿಕೊಳ್ಳುವ ಮೂಲಕ ಅವ್ಯಸ್ಥೆಯನ್ನು ತೆರೆದಿಟ್ಟ ಪ್ರಸಂಗ ನಡೆಯಿತು.

ಕೆಲ ದಿನಗಳಿಂದ ಬಿಸಿ ನೀರು ಇಲ್ಲದೇ ತಣ್ಣೀರಿನಿಂದಲೇ ಸ್ನಾನ ಮಾಡಬೇಕಾಗುತ್ತಿದ್ದು, ಊಟಕ್ಕೆ ನೀಡುವ ಚಪಾತಿ ಸರಿಯಾಗಿ ಬೇಯಿಸುವದಿಲ್ಲ. ತಿಳಿ ನೀರು ಸಾರು, ಪಲ್ಯದಲ್ಲಿ ಸಮರ್ಪಕ ತರಕಾರಿ ಇರುವುದಿಲ್ಲ. ಕೇಳಿದರೆ ಸಿಬ್ಬಂದಿ ಗದರಿಸುತ್ತಾರೆ. ಯಾರಿಗೆ ಹೇಳಬೇಕು ಎಂದು ಕೆಲ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೇ ಇರುವುದನ್ನು ಗಮನಿಸಿದ ಆಯೋಗದ ಸದಸ್ಯರು, ಎಷ್ಟು ದಿಗಳಿಂದ ಸ್ವಚ್ಛಗೊಳಿಸಿಲ್ಲ , ಕೂಡಲೇ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು. ಸ್ವಚ್ಛತೆ ಕುರಿತು ತಾವೂ ಪರಿಶೀಲಿಸುವುದಿಲ್ಲವೇ ಎಂದು ಸ್ಥಳದಲ್ಲಿದ್ದ ತಾಲೂಕು ಆರೋಗ್ಯಾಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿದರು.

ಅಡುಗೆ ಕೋಣೆ, ಶೌಚಗೃಹ ಮತ್ತು ತರಗತಿ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳ ಸಮಸ್ಯೆ ಆಲಿಸಿದ ಆಯೋಗದ ಸದಸ್ಯರು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರೇಡ್-೨ ಡಾ.ರಮೇಶ ಹಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರೆ, ಸಿಡಿಪಿಒ ಗೌತಮ ಶಿಂಧೆ, ಬಾಲ ಕಾರ್ಮಿಕ ಅಧಿಕಾರಿ ಸಂತೋಷ ಗಾಯಕವಾಡ, ಪಿಎಸ್‌ಐ ಸುರೇಶ ಹಜ್ಜರಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗೌರಿಶಂಕರ ಪರ್ತಾಪೂರೆ, ವಿನೋದ ಕುರೆ, ಶಿರಸ್ತೇದಾರ ಅನೀಲಕುಮಾರ ಚಾಂದೆ ಇತರರಿದ್ದರು.

ಕೋಚಿಂಗ್ ಸೆಂಟರ್‌ಗೆ ಭೇಟಿ ವರದಿಗೆ ಸೂಚನೆ: ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಕೋಚಿಂಗ್ ಸೆಂಟರ್ ಒಂದಕ್ಕೆ ಆಯೋಗದ ಸದಸ್ಯರು ಭೇಟಿ ನೀಡಿ ಮಕ್ಕಳ ಸಮಸ್ಯೆ, ದಾಖಲೆಗಳನ್ನು ಪರಿಶೀಲಿಸಿದರು. ಅನುಮತಿ ಇಲ್ಲದೇ ನಡೆಸುವ ಕೋಚಿಂಗ್ ಸೆಂಟರ್ ಮುಚ್ಚಿಸಿ ಆಯೋಗಕ್ಕೆ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಬಿಇಒ ಸಿದ್ದವೀರಯ್ಯರುದನೂರ ಅವರಿಗೆ ಸೂಚನೆ ನೀಡಿದರು.