ರಬಕವಿ/ಬನಹಟ್ಟಿ: ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡವನ್ನು ಕಡ್ಡಾಯವಾಗಿ ಎಲ್ಲರೂ ಬಳಸಬೇಕು. ಉಳಿಸಿ ಬೆಳೆಸಿ ಎಂದು ಹೇಳುವುದಕ್ಕಿಂತ ಅದನ್ನು ಎಲ್ಲರೂ ಬಳಸೋಣ. ಅದು ತಾನಾಗಿಯೇ ಉಳಿದು ಬೆಳೆಯುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ ಕನ್ನಡ ರಾಜ್ಯೋತ್ಸವ ಸಮಿತಿ ಆಶ್ರಯದಲ್ಲಿ ಭಾನುವಾರ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಭೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಪ್ರಸ್ತುತ ತಂತ್ರಜ್ಞಾನ ದಿನೇ ದಿನೆ ಬೆಳೆಯುತ್ತಿದ್ದು, ಸರ್ಕಾರಿ ಎಲ್ಲ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎನ್ನುವುದಕ್ಕೆ ಪ್ರಾಮಾಣಿಕವಾಗಿ ವಿಧಾನ ಸಭೆಯಲ್ಲಿ ಹೋರಾಟ ಮಾಡುತ್ತೇನೆ ಎಂದರು.
ಹಿರಿಯ ಸಾಹಿತಿ, ಅರ್ಥಶಾಸ ತಜ್ಞ ಪ್ರೊ.ಎಂ.ಎಸ್. ಬದಾಮಿ ಮಾತನಾಡಿ, ಕನ್ನಡ ಭಾಷೆಯನ್ನು ಸಂಪೂರ್ಣ ಬಲ್ಲವನಿಗೆ ಬೇರೆ ಭಾಷೆಗಳ ಜ್ಞಾನ ಬೇಗ ಅರಿವಾಗುತ್ತದೆ. ಸರ್ಕಾರ ಕೂಡ ರಾಜ್ಯದ ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಮಾಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಆತಂಕದ ಛಾಯೆ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ತಹಸೀಲ್ದಾರ್ ಪ್ರಶಾಂತ ಚನಗೊಂಡ, ಡಾ.ಪದ್ಮಜೀತ ನಾಡಗೌಡಪಾಟೀಲ, ಡಾ.ರವಿ ಜಮಖಂಡಿ, ತಾಲೂಕಿನ ತಾಪಂ ಅಧಿಕಾರಿ ಸಂಜು ಹಿಪ್ಪರಗಿ ಮಾತನಾಡಿದರು. ಕಾರ್ಯಕ್ರಮ ಸಂಘಟಕ ಚಿದಾನಂದ ಸೊಲ್ಲಾಪುರ, ಎಂ.ಬಿ. ನಾಶಿ, ಶ್ರೀಶೈಲ ಬುಯ್ಯರ, ಸಿದ್ದಪ್ಪ ಮೇಣಿ, ಶೇಖರ ಕೊಟ್ರಶೆಟ್ಟಿ, ಮಹಾದೇವ ಕೋಟ್ಯಾಳ, ಡಾ.ಜಿ.ಎಚ್. ಚಿತ್ತರಗಿ, ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ದುಪದಾಳ, ಸಿದ್ದಪ್ಪ ಮೇಣಿ, ಚಿದಾನಂದ ಗಾಳಿ, ಬಾಬು ಕೆಳಗಿನಮನಿ ಸೇರಿ ಅನೇಕರಿದ್ದರು. ಎಂ.ಎಸ್. ಗಡೆನ್ನವರ ನಿರೂಪಿಸಿದರು. ಸಮರ್ಥ ಗಡೆನ್ನವರ ಹಾಗೂ ಬಾಬು ಗಂಗಾವತಿ ಕನ್ನಡ ಗೀತೆಗಳನ್ನು ಹಾಡಿದರು. ಸುಭಾಸ ಮಧುರಖಂಡಿ ವಂದಿಸಿದರು.