ಜಿಲ್ಲೆ

ನಿಡುಗಲ್ಲು ಗ್ರಾಮದಲ್ಲಿ ಪಂಚಲೋಹದ ಪೀಠ ಪ್ರಭಾವಳಿ ಶಾಸನ ಪತ್ತೆ

ತುಮಕೂರು: ಜಿಲ್ಲೆಯ ಅತ್ಯಂತ ಪುರಾತನ ಪಟ್ಟಣಗಳಲ್ಲೊಂದಾದ ನಿಡುಗಲ್ಲನ್ನು ನೊಳಂಬರು, ನಿಡುಗಲ್​ ಚೋಳರು, ಹೊಯ್ಸಳರು, ವಿಜಯನಗರ ಚಕ್ರವರ್ತಿಗಳು ಅಲ್ಲದೆ ಪಾಳೆಗಾರರು ಆಳ್ವಿಕೆ ನಡೆಸಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ಪಾವಗಡ ತಾಲೂಕಿನ ನಿಡುಗಲ್ಲು ಬೆಟ್ಟದ ವೀರಭದ್ರ ದೇವಾಲಯದಲ್ಲಿ ಪಂಚಲೋಹದ ಪೀಠ ಪ್ರಭಾವಳಿ ಶಾಸನ ಪತ್ತೆಯಾಗಿದೆ.

ಈ ಪೀಠ ಪ್ರಭಾವಳಿಯನ್ನು ಪಂಚಲೋಹದಲ್ಲಿ ತಯಾರಿಸಲಾಗಿದ್ದು, ಐದು ಪ್ರತ್ಯೇಕವಾದ ತುಂಡುಗಳಲ್ಲಿದ್ದು ಅದನ್ನು ಜೋಡಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಇದರ ತುದಿಗೆ ನಾಗಾಭರಣ ಜೋಡಿಸಲೂ ಸಹ ಅವಕಾಶ ಮಾಡಲಾಗಿದೆ. ಇದು 6 ಅಡಿ ಎತ್ತರವಿದ್ದು ತಳಭಾಗದ ಪಟ್ಟಿಯ ಮೇಲ್ಮುಖದಲ್ಲಿ ಬಲ ಮತ್ತು ಎಡಭಾಗದಲ್ಲಿ 21 ಸಾಲಿನ ಕನ್ನಡ ಭಾಷೆಯ ಶಾಸನವಿದೆ.

ಈ ಶಾಸನವು ಶಾಲಿವಾಹನ ಶಕೆ 1644 (ಕ್ರಿ.ಶ. 1722)ರ ಕಾಲಕ್ಕೆ ಸೇರಿದ್ದು ನಿಡುಗಲ್ಲನ್ನು ಆಳ್ವಿಕೆ ಮಾಡುತ್ತಿದ್ದ ಶ್ರೀಮನ್ಮಹನಾಯಕಾಚಾರ್ಯ ಬಿರುದಾಂಕಿತನಾದ ಹರತಿ ನಿಡುಗಲ್ಲು ರಾಜ್ಯದ ಹೊಟ್ಟೆಣ್ಣ ನಾಯಕನ ಪುತ್ರ್ರನಾದ ವೀರತಿಮ್ಮಣ್ಣನಾಯಕರ ಪುತ್ರನಾದ ಮುಮ್ಮಡಿ ಹೊಟ್ಟೆಣ್ಣನಾಯಕರು ಕಾಳಾಂಜನ ಗಿರಿಗೆ ಪ್ರತಿನಾಮವಾದಂತ ನಿಡುಗಲ್ಲು ದುರ್ಗದ ವೀರೇಶ್ವರಸ್ವಾಮಿಯವರ (ವೀರಭದ್ರ) ಸೇವೆಗೆ ಮಾಡಿಸಿ ಸಮರ್ಪಿಸಿದ ಪೀಠ ಪ್ರಭಾವಳಿಗೆ ಶುಭಮಸ್ತು ಎಂದಿದೆ.

ಈ ಪೀಠ ಪ್ರಭಾವಳಿಯನ್ನು ವೀರಭದ್ರ ದೇವರಿಗೆ ಈಗಲೂ ತೊಡಿಸುವರು. ಹೆಚ್ಚು ತೂಕವಿರುವ ಪ್ರಭಾವಳಿಯನ್ನು ಅತ್ಯಂತ ಕಲಾತ್ಮಕವಾಗಿ ಕುಸುರಿ ಕೆತ್ತನೆ ಮೂಲಕ ನಿರ್ಮಿಸಲಾಗಿದೆ. ವಿಗ್ರಹದ ಸಮತೋಲನ ಅನುಸರಿಸಿ ಅದಕ್ಕೆ ಹೊಂದಿಕೆಯಾಗುವಂತೆ ವಿಶ್ವಕರ್ಮಿಯು ನಿರ್ಮಿಸಿರುವುದು ವಿಶೇಷವಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್​.ಯೋಗೀಶ್ವರಪ್ಪ "ವಿಜಯವಾಣಿ'ಗೆ ತಿಳಿಸಿದ್ದಾರೆ.

ಈಗ ವೀರಭದ್ರ ದೇವಾಲಯವನ್ನು ಅದರ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಭಕ್ತರು ಜೀಣೋರ್ದ್ಧಾರ ಮಾಡಿದ್ದು, ಮೊದಲಿನಂತೆ ದೇವಾಲಯದ ಪೂಜಾದಿ ಕಾರ್ಯಗಳು ಮತ್ತು ದಾಸೋಹ ನಡೆಯುತ್ತಿದೆ. ಈ ಶಾಸನವನ್ನು ಪರಿಶೋಧಿಸಲು ವೀರಭದ್ರ ದೇವಾಲಯದ ಟ್ರಸ್ಟ್​ ಕಾರ್ಯದರ್ಶಿ ವಿಶ್ವನಾಥ್​, ಅನಿತಾ ಮಂಜುನಾಥ್​ ನೆರವಾಗಿದ್ದಾರೆ. ಈ ಶಾಸನದ ಆಧಾರದ ಮೇಲೆ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.