ಮಳವಳ್ಳಿ: ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲೇ ಪೈಪೋಟಿ ಏರ್ಪಟ್ಟು ಪೊಲೀಸ್ ಭದ್ರತೆಯಲ್ಲಿ ಮತದಾನ ಪ್ರಕ್ರಿಯೆ ನಡೆದು ಅಂತಿಮವಾಗಿ ಚಿಕ್ಕಣ್ಣೇಗೌಡ ಅಧ್ಯಕ್ಷ, ನಾಗಮ್ಮ ಉಪಾಧ್ಯಕ್ಷೆಯಾಗಿ ಚುನಾಯಿತರಾದರು.
14 ಸದಸ್ಯ ಬಲಹೊಂದಿರುವ ಇಲ್ಲಿನ ಗ್ರಾಮ ಪಂಚಾಯಿತಿಗೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಆಕಾಂಕ್ಷಿತರಲ್ಲಿ ಒಬ್ಬರಾದ ಚಿಕ್ಕಣ್ಣೇಗೌಡ ತಮ್ಮ ಬೆಂಬಲಿಗ ಸದಸ್ಯರನ್ನು 17 ದಿನಗಳಿಂದ ಪ್ರವಾಸಕ್ಕೆ ಕರೆದೊಯ್ದಿದ್ದರು. ಮತ್ತೊಬ್ಬ ಆಕಾಂಕ್ಷಿ ನಂಜುಂಡೇಗೌಡ ಪ್ರವಾಸಕ್ಕೆ ತೆರಳಿದ್ದ ಕೆಲವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಚಿಕ್ಕಣ್ಣೇಗೌಡ ಪ್ರವಾಸದಲ್ಲಿದ್ದ ಸದಸ್ಯರನ್ನು ಗೌಪ್ಯ ಸ್ಥಳದಲ್ಲೇ ಇರಿಸಿಕೊಂಡಿದ್ದರು.
ಚುನಾವಣೆ ದಿನವಾದ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಣ್ಣೇಗೌಡ, ನಂಜುಂಡೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಮತ್ತು ಸಾಕಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಕೊನೆ ಕ್ಷಣದವರೆಗೆ ಸದಸ್ಯರ ಮನವೊಲಿಸುವ ಕಾರ್ಯ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾ.ಪಂ.ಕಾರ್ಯಾಲಯದ ಬಳಿ ಗ್ರಾಮಾಂತರ ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ಮಧ್ಯಾಹ್ನ 12 ಗಂಟೆಕ್ಕೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಪ್ರವಾಸದಲ್ಲಿದ್ದ ಸದಸ್ಯರು ನೇರವಾಗಿ ವಾಹನದಲ್ಲಿ ಗ್ರಾ.ಪಂ. ಕಚೇರಿಗೆ ಆಗಮಿಸಿ ಮತದಾನ ಮಾಡಿದರು. ಚಿಕ್ಕಣ್ಣೇಗೌಡ ಹಾಗೂ ನಾಗಮ್ಮ ತಲಾ 8 ಮತಗಳನ್ನು ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.