ಭಾಲ್ಕಿ: ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವುಗಳ ನಡುವೆ ಮಾಡುವ ಜೀವಪರ ಕಾರ್ಯಗಳು ಅಜರಾಮರವಾಗಿ ಉಳಿಯುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಬಿಕೆಐಟಿ)ದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಶತಾಯುಷಿ ದಿವಂಗತ ಕೇಶವರಾವ ನಿಟ್ಟೂರಕರ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಅಳಿದು ಹೋಗುತ್ತಾನೆ. ಸಂಸ್ಥೆಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ ಮನುಷ್ಯ ಜೀವಿತಾವಧಿಯಲ್ಲಿ ಮಾಡುವ ಸಮಾಜ ಸೇವೆ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸೇವೆಯನ್ನು ನಿಟ್ಟೂರಕರ್ ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ ಎಂದರು.
ಶತಾಯುಷಿಗಳಾಗಿ ಸಾರ್ಥಕ ಬದುಕು ಸಾಗಿಸಿದ ಅವರು ಜೀವನದುದ್ದಕ್ಕೂ ಸರಳತೆ ಮೈಗೂಡಿಸಿಕೊಂಡಿದ್ದರು. ವಿಧಾನ ಪರಿಷತ್ ಉಪಸಭಾಪತಿ, ಸದಸ್ಯರಾಗಿ ಈ ಭಾಗದಲ್ಲಿ ಶೈಕ್ಷಣಿಕ, ನೀರಾವರಿ, ರಸ್ತೆ ಅಭಿವೃದ್ಧಿ ಸೇರಿ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ್ದಾರೆ. ನಮ್ಮ ತಂದೆ ಡಾ.ಭೀಮಣ್ಣ ಖಂಡ್ರೆ ಅವರೊಂದಿಗೆ ಅತ್ಯಂತ ಆಪ್ತರಾಗಿದ್ದರು. ಅವರು ನಡೆಸಿದ ಎಲ್ಲ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ನಮ್ಮ ಪರಿವಾರದ ಬಗ್ಗೆ ಅವರು ವಿಶೇಷ ಪ್ರೀತಿ ಕಾಳಜಿ ಹೊಂದಿದ್ದರು. ಅವರ ದೂರದೃಷ್ಟಿ ಆಲೋಚನೆಗಳು ನಮಗೆ ಸದಾಕಾಲ ಪ್ರೇರಣೆಯಾಗಿ ಉಳಿಯುತ್ತವೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಉಷಾ ರಾಜೇಂದ್ರ ನಿಟ್ಟೂರಕರ್ ಮಾತನಾಡಿ, ದಿವಂಗತ ಕೇಶವರಾವ ನಿಟ್ಟೂರಕರ್ ಬದುಕಿನುದ್ದಕ್ಕೂ ಬುದ್ದ, ಬಸವ, ಅಂಬೇಡ್ಕರ್ ತತ್ವ ಪಾಲಿಸಿಕೊಂಡು ಬಂದಿದ್ದರು. ಅಂತವರ ಮನೆತನದ ಸೊಸೆ ನಾನಾಗಿರುವುದು ಹೆಮ್ಮೆ ತರಿಸಿದೆ ಎಂದರು.
ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪ್ರಮುಖರಾದ ಪ್ರವೀಣ ಹಣಮಶೆಟ್ಟಿ, ಮಾಧುರಿ ರಾಘವೇಂದ್ರ ನಿಟ್ಟೂರಕರ್, ರವೀಂದ್ರ ಕುಲಕರ್ಣಿ ಇತರರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ ಸ್ವಾಗತಿಸಿದರು. ಬಸವರಾಜ ಕಾವಡಿ ನಿರೂಪಣೆ ಮಾಡಿ ವಂದಿಸಿದರು.
ಶತಾಯುಷಿ ದಿವಂಗತ ಕೇಶವರಾವ ನಿಟ್ಟೂರಕರ್ ಜೀವನದುದ್ದಕ್ಕೂ ಶಿಸ್ತು, ಪ್ರಾಮಾಣಿಕತೆ, ಉತ್ತಮ ಚಾರಿತ್ರ್ಯಕಾಪಾಡಿಕೊಂಡು ಬಂದಿದ್ದರು. ಯುವಶಕ್ತಿ ಸನ್ಮಾರ್ಗದಲ್ಲಿ ಸಾಗಬೇಕು ಎನ್ನುವ ಅವರ ಸಂಕಲ್ಪವನ್ನು ನಾವೆಲ್ಲರೂ ಸೇರಿ ಈಡೇರಿಸುವ ಪ್ರಯತ್ನ ಮಾಡೋಣ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ ಬೀದರ್