ಜಿಲ್ಲೆ

ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ಖಂಡನೆ

ಕಲಬುರಗಿ: ಬಸವತತ್ವ ಪ್ರಚಾರಕ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರ ಕೊಲೆ ಬೆದರಿಕೆ ಹಾಕಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶನಿವಾರ ಬೆಳಗ್ಗೆ ೧೧ಕ್ಕೆ ಜಗತ್ ವೃತ್ತದ ಬಸವೇಶ್ವರ ಪ್ರತಿಮೆ ಬಳಿ ಧರಣಿ ನಡೆಸುವುದಾಗಿ ಚಿಂತಕ ಪ್ರೊ.ಆರ್.ಕೆ.ಹುಡಗಿ ತಿಳಿಸಿದರು.

ನಿಜಗುಣಾನಂದ ಶ್ರೀಗೆ ಬೆದರಿಕೆ ಇಡೀ ಶರಣ ಪರಂಪರೆಗೆ ಬೆದರಿಕೆ ಇದ್ದಂತೆ. ಬುದ್ಧ, ಬಸವ, ಡಾ.ಅಂಬೇಡ್ಕರ್ ತತ್ವದಡಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಒಡ್ಡಿರುವ ಬೆದರಿಕೆ ಎಂದು ಭಾವಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫ್ಯಾಸಿಸ್ಟ್ ಧೋರಣೆ ದೇಶಾದ್ಯಂತ ಪಸರಿಸುತ್ತಿದೆ. ವಿರೋಧಿಗಳು, ಸರ್ಕಾರವನ್ನು ಪ್ರಶ್ನಿಸುವವರು, ವೈಜ್ಞಾನಿಕ ಮನೋಭಾವದವರನ್ನು ಗುರಿಯಾಗಿ ಮಾಡಲಾಗುತ್ತಿದೆ. ವಿಚಾರವಾದಿಗಳು, ಸಾಹಿತಿ, ಕಲಾವಿದರಿಗೆ ಕೊಲೆ ಬೆದರಿಕೆ ಕರೆ ಬರುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆದರಿಕೆ ಹಾಕುವವರನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಿದರು. ಬಸಣ್ಣ ಸಿಂಘೆ, ಪ್ರಭುಲಿಂಗ ಮಹಾಗಾಂವಕರ್, ಅರ್ಜುನ ಭದ್ರೆ, ಮಹೇಶ ರಾಠೋಡ್, ಆರ್.ಜಿ. ಶೆಟಗಾರ, ಶರಣಗೌಡ ಪಾಟೀಲ್, ಶಿವಕುಮಾರ ರೇಷ್ಮಿ, ಎ.ಬಿ. ಹೊಸಮನಿ, ಅಯ್ಯನಗೌಡ ಪಾಟೀಲ್, ಅಶೋಕ ಘೂಳಿ, ರವೀಂದ್ರ ಶಾಬಾದಿ, ಖಾಜಿ ರಿಜ್ವಾನ್ ಸಿದ್ದಿಕಿ ಇತರರಿದ್ದರು.