ಜಿಲ್ಲೆ

ನಿಜ ಸಂತ್ರಸ್ಥರಿಗೆ ಮಾತ್ರ ನಿವೇಶನ

ಬಾಗಲಕೋಟೆ: ಕೃಷ್ಣಾ ಮೇಲ್ದಂಡ ಯೋಜನೆಯಡಿಯಲ್ಲಿ ಮುಳುಗಡೆಯಾದ ಸಂತ್ರಸ್ಥರಿಗೆ ಮಾತ್ರ ನಿವೇಶನ ನೀಡಲಾಗುವುದೆಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಆವರಣದಲ್ಲಿ ಸೋಮವಾರ ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಂಡ ಬಿಟಿಡಿಎ ನೂತನ ಸಭಾಪತಿಗಳ ಪದಗ್ರಹಣ ಸಮಾರಂಭದಲ್ಲಿ ಸಭಾಪತಿಯ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಬಾಗಲಕೋಟೆ ನಗರ ಆನೆಕಟ್ಟಿನ ಹಿನ್ನೀರಿನಿಂದ ಮುಳುಗಡೆಗೊಂಡ ದೇಶದಲ್ಲಿಯೇ ದೊಡ್ಡ ನಗರವಾಗಿದ್ದು, ಇಲ್ಲಿನ ಆಸ್ತಿ ಪಾಸ್ತಿ ಕಳೆದುಕೊಳ್ಳುವದರ ಜೊತೆಗೆ ವ್ಯಾಪಾರ ವ್ಯವಹಾರಕ್ಕು ಹಿನ್ನಡೆಯಾಗಿದೆ ಎಂದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಬಾಗಲಕೋಟೆ ನಗರವನ್ನು ಪುನಶ್ಚೇತನಗೊಳಿಸಲು ಸನ್ನದ್ದವಾಗಿದೆ. ಈ ದೃಷ್ಠಿಯಿಂದ ಅಭಿವೃದ್ದಿಗೆ ಇನ್ನು ಭೂಮಿ ಬೇಕಾಗಿದ್ದು, ಮುಳುಗಡೆಗೂ ತ್ಯಾಗಮಯಿಗಳಾದ ಸಂತ್ರಸ್ಥರು ನಗರ ಅಭಿವೃದ್ದಿಗಾಗಿ ತಮ್ಮ ಜಮೀನುಗಳನ್ನು ತಂಟೆ ತಕರಾರು ಇಲ್ಲದೇ ನೀಡಿ ನಗರ ಬೆಳೆಯಲು ಸಹಕಾರ ನೀಡಬೇಕು. ಸಂತ್ರಸ್ಥರು ನಿವೇಶನ ಪಡೆದುಕೊಳ್ಳುವಲ್ಲಿ, ಸಂತ್ರಸ್ಥರಲ್ಲದವರು ಕೆಲವು ಏಜೆಂಟರುಗಳ ಮೂಲಕ ಕೊಟ್ಟಿ ದಾಖಲೆ ಸೃಷ್ಠಿ ಮಾಡಿ ನಿವೇಶನ ಪಡೆಯಲು ಪ್ರಯತ್ನಿಸಿದರೆ ನಿರ್ಧಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕೊಟ್ಟಿ ದಾಖಲೆ ಸೃಷ್ಠಿಸಿದವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದೆಂದರು.

ನಿಜವಾದ ಸಂತ್ರಸ್ಥರಿಗೆ ನಿವೇಶನ ಕೊಡುವಲ್ಲಿ ವಿಳಂಬವಾದರೆ ಮತ್ತು ಅಧಿಕಾರಿಗಳು ಸ್ಪಂದನೆ ನೀಡದಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದಾಗಿದೆ. ನವನಗರದಲ್ಲಿ ರೂಪುಗೊಂಡ ಸೆಕ್ಟರಗಳಲ್ಲಿ ಹೇಳಿಕೊಳ್ಳುವಂತ ಮಾರುಕಟ್ಟೆ ಇಲ್ಲದಿರುವದರಿಂದ ನವನಗರ, ವಿದ್ಯಾಗಿರಿ ಹಾಗೂ ಹಳೆಯ ಬಾಗಲಕೋಟೆ ನಿವಾಸಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೈಲ್ವೆ ನಿಲ್ದಾಣ ಹಾಗೂ ರೋಟರಿ ಸರ್ಕಲ್ ಮಧ್ಯದಲ್ಲಿ ಸುಸಜ್ಜಿತ ಹಾಗೂ ಒಂದೇ ಸೂರಿನಡಿ ಎಲ್ಲ ವಸ್ತುಗಳ ದೊರೆಯುವಂತಹ ಮಾರುಕಟ್ಟೆ ನಿರ್ಮಿಸುವ ಗುರಿ ಇದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಕಳೆದ ೬ ತಿಂಗಳಿನಿAದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರಕ್ಕೆ ಸಭಾಪತಿ ಇಲ್ಲದೇ ಇರುವದರಿಂದ ಸಮಸ್ಯೆಯಾಗಿತ್ತು, ಇಂದು ಅನುಭವಿಗಳಾದ ಹಾಗೂ ಈ ಹಿಂದೆ ಬಿಟಿಡಿಎಯಿಂದ ಅಧಿಕಾರ ನಿಭಾಯಿಸಿದ ಅನುಭವುಳ್ಳ ಶಾಸಕ ಮೇಟಿ ಅವರನ್ನು ಸಭಾಪತಿಗಳನ್ನಾಗಿ ಸರಕಾರ ನೇಮಿಸಿದೆ. ನಾನು ಕೂಡಾ ಸದಸ್ಯನಿದ್ದು, ಸಭಾಪತಿ ಮಾರ್ಗದರ್ಶನದಂತೆ ಕಾರ್ಯನರ್ವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ಶಾಸಕ ಎಚ್.ವಾಯ್.ಮೇಟಿ ಅವರು ಈ ಹಿಂದೆ ಬಿಟಿಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿಗಳಾಗಿದ್ದಾರೆ. ಅಲ್ಲದೇ ಜನರಿಗೆ ನೇರವಾಗಿ ತಲುಪುವ ಜನಪ್ರತಿನಿಧಿಯಾಗಿದ್ದು, ಇನ್ನು ಮುಂದೆ ಬಿಟಿಡಿಎ ಕಾರ್ಯಗಳು ಸುಗಮವಾಗಿ ಸಾಗಲು ಅನಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಶಾಸಕ ಮೇಟಿ ಅವರಿಂದ ನಾನು ಬಂದಾಗಿನಿAದ ಅವರು ಹಿರಿಯರು, ಕಿರಿಯರನ್ನದೆ ಗೌರವದಿಂದ ಮಾತನಾಡುವ ಶೈಲಿಯಿಂದ ನಾನು ಕಲಿತಿದ್ದೇನೆ. ಯುನಿಟ್-೩ ರಲ್ಲಿ ಉಂಟಾಗ ಸಮಸ್ಯೆಯನ್ನು ಶಾಸಕ ನೆರವಿನಿಂದ ಸುಲಭವಾಗಿ ನಿಭಾಯಿಸುವಲ್ಲಿ ಯಶಸ್ವಿಯಾದೆವು ಎಂದರು. ಕೆಬಿಜೆಎನ್‌ಎಲ್ ಮುಖ್ಯ ಇಂಜಿನೀಯರ್ ಎಚ್.ಎನ್.ಶ್ರೀನಿವಾಸ ಮಾತನಾಡಿದರು. ಪ್ರಾರಂಭದಲ್ಲಿ ಬಿಟಿಡಿಎ ಮುಖ್ಯ ಇಂಜಿನೀಯರ್ ಮನ್ಮಥಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ನಂಜಯ್ಯನಮಠ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.