ವಿಜಯಪುರ: ನಿಗೂಢ ಸ್ಪೋಟದ ಸದ್ದು ಹಾಗೂ ಭೂಕಂಪನದ ಅನುಭವ ಆಗಿರುವ ಘಟನೆ ವಿಜಯಪುರ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ 9.50ರ ಸುಮಾರಿಗೆ ಕೇಳಿ ಬಂದ ಭಾರಿ ಪ್ರಮಾಣದ ಸ್ಪೋಟದ ಸದ್ದು, ಜೊತೆಗೆ ಭೂಮಿ ಕಂಪಿಸಿದ ಅನುಭವಕ್ಕೆ ಜನ್ರು ಬೆಚ್ಚಿ ಬಿದ್ದಿದ್ದಾರೆ. ಕಳೆದ ವಾರವು ಇದೇ ರೀತಿ ಭೂಕಂಪಿಸಿದ ಅನುಭವವಾಗಿತ್ತು, ಇದೀಗ ಮತ್ತೆ ಅದೇ ರೀತಿಯ ಘಟನೆಯಿಂದ ಅಡವಿ ಸಂಗಾಪೂರ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ರಾತ್ರಿ ಇಡೀ ನಿದ್ರೆ ಮಾಡದೇ ಆತಂಕದಲ್ಲೇ ಮಹಿಳೆಯರು, ಮಕ್ಕಳು, ವೃದ್ದರು ಕಾಲ ಕಳೆದಿದ್ದಾರೆ.
ಮೊನ್ನೆಯಷ್ಟೇ ಕೊಲ್ಹಾರ ತಾಲೂಕಿನ ಕೂಡಗಿ, ಮಸೂತಿ, ಮಲಘಾಣ, ಮನಗೂಳಿ, NTPC ಟೌನ್ ಶಿಪ್ ಬಳಿಯೂ ಇದೇ ರೀತಿಯ ಅನುಭವವಾಗಿತ್ತು.
ಈಗ ಮತ್ತೆ ಅಡವಿ ಸಂಗಾಪೂರ ಗ್ರಾಮದಲ್ಲಿ ಕೇಳಿ ಬಂದ ಭಾರೀ ಸ್ಪೋಟದ ಸದ್ದು ಹಾಗೂ ಭೂಕಂಪನದ ಅನುಭವದಿಂದ ಜಿಲ್ಲೆಯ ಜನ್ರು ಭಯಭೀತರಾಗಿದ್ದಾರೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಡವಿಸಂಗಾಪುರ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಇನ್ನು ಇದಷ್ಟೆ ಅಲ್ಲದೆ ತಿಕೋಟಾ ತಾಲೂಕಿನ ಕಳ್ಳಕವಟಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ, ಸಿದ್ದಾಪುರದಲ್ಲೂ ನಿನ್ನೆ ರಾತ್ರಿ ಭೂಮಿಯಲ್ಲಿ ಶಬ್ದ ಕೇಳಿಬಂದ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ.