ಧಾರವಾಡ: ಸರ್ಕಾರ ಮರಾಠ ಸಮುದಾಯ ನಿಗಮ ಸ್ಥಾಪಿಸಲು ನಿರ್ಧರಿಸುವ ಬೆನ್ನಲ್ಲೇ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿದೆ. ಈ ಮಧ್ಯೆ ಮರಾಠ ಕಾಂತ್ರಿ (ಮೌನ) ಮೋರ್ಚಾ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ, ಸಮುದಾಯಕ್ಕೆ ಪ್ರಾಧಿಕಾರ ಅಥವಾ ನಿಗಮ ಬೇಕಾಗಿಲ್ಲ. ಸಮಾಜವನ್ನು 3ಬಿ ಪ್ರವರ್ಗದಿಂದ 2ಎಗೆ ಸೇರಿಸಬೇಕು ಎಂಬ ಒಕ್ಕೊರಲ ಧ್ವನಿ ಕೇಳಿಬಂತು.
ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದ ಮೈದಾನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮರಾಠ ಕಾಂತ್ರಿ (ಮೌನ) ಮೋರ್ಚಾದ ವಿವಿಧ ಜಿಲ್ಲೆಗಳ ಸಂಯೋಜಕರು, ಸ್ಥಳೀಯ ಮುಖಂಡರಿಂದ ಪಕ್ಷಭೇದ ಮರೆತು 2ಎ ಮೀಸಲಾತಿಯೊಂದೇ ಸಾಕು ಎಂಬ ಹಕ್ಕೊತ್ತಾಯ ವ್ಯಕ್ತವಾಯಿತು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ನಮಗೆ 50 ಅಲ್ಲ, 500 ಕೋಟಿ ರೂ. ಕೊಟ್ಟರೂ ಬೇಡ. ಮರಾಠ ಸಮಾಜದ ಬಗ್ಗೆ ಕಾಳಜಿ ಇದ್ದರೆ 7 ದಿನಗಳೊಳಗೆ 2ಎ ಗುಂಪಿಗೆ ಸೇರಿಸುವ ನಿರ್ಣಯ ಘೋಷಿಸಬೇಕು. ಘೋಷಿಸದಿದ್ದರೆ ಬರುವ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ. ನಾವೂ ಪಕ್ಷದ ಮುಖಂಡರ ಮೂಲಕ ಸರ್ಕಾರಕ್ಕೆ ಪತ್ರ ಕಳುಹಿಸುತ್ತೇವೆ. ಸರ್ಕಾರ ಚುನಾವಣೆ ಗಿಮಿಕ್ ಮಾಡಬಾರದು. ಗಿಮಿಕ್ ಮಾಡುವುದಾದರೆ ಎಷ್ಟು ಸಮಾಜ ಇವೆಯೋ ಅಷ್ಟು ನಿಗಮ, ಪ್ರಾಧಿಕಾರ ರಚಿಸಲಿ ಎಂದೂ ಹೇಳಿದರು.
ವಿಧಾನ ಪರಿಷತ್ ಸದಸ್ಯರ ಶ್ರೀನಿವಾಸ ಮಾನೆ ಮಾತನಾಡಿ, ಮರಾಠ ಸಮಾಜ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುನ್ನಲೆಗೆ ಬರಬೇಕು. ಸರ್ಕಾರ ಹೊರಡಿಸಿದ ಟಿಪ್ಪಣಿ, ಸುತ್ತೋಲೆಯ ಸರಿ ತಪ್ಪಿನ ಬಗ್ಗೆ ಸಮಾಜದ ಮುಖಂಡರು, ನಾಯಕರು ಪರಿಶೀಲಿಸಬೇಕು. ಸಮಾಜಕ್ಕೆ ನಿಗಮ- ಪ್ರಾಧಿಕಾರದ ಬದಲು ಬೀದರ್ನಲ್ಲಿ ಘೋಷಿಸಿದಂತೆ 2ಎ ಮೀಸಲಾತಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ರವಾನಿಸೋಣ ಎಂದರು.
ಬಸವಕಲ್ಯಾಣದ ಮಾಜಿ ಶಾಸಕ ಮಾರುತಿರಾವ್ ಮುಳೆ ಮಾತನಾಡಿ, ಮರಾಠ ಸಮಾಜದ ಶಾಸಕ, ಮಂತ್ರಿಗಳ ಮೇಲೆ 2ಎ ಮೀಸಲಾತಿಗಾಗಿ ಒತ್ತಡ ಹೇರಬೇಕು. ಮರಾಠಿಗರು ಒಗ್ಗೂಡಿ ಅವರ ಕಿವಿ ಹಿಂಡುವ ಕೆಲಸ ಮಾಡಬೇಕು ಎಂದರು.
ಧಾರವಾಡದ ಸುಭಾಷ ಶಿಂಧೆ ಮಾತನಾಡಿ, 125 ವರ್ಷ ಇತಿಹಾಸ ಹೊಂದಿದ ಮರಾಠ ವಿದ್ಯಾಪ್ರಸಾರಕ ಮಂಡಳಿಯಲ್ಲಿ 1ನೆ ತರಗತಿಯಿಂದ ಪದವಿವರೆಗೆ ಕನ್ನಡದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮರಾಠಿಗರು ಒಂದು ಪಕ್ಷಕ್ಕೆ ಸೀಮಿತ ಎಂಬ ಅಪಸ್ವರ ಎತ್ತಿದ ಸರ್ಕಾರಗಳು ಮೀಸಲಾತಿ ಹೋರಾಟ ಹತ್ತಿಕ್ಕಿವೆ. 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಡೆಸೋಣ ಎಂದರು.
ಬೆಳಗಾವಿ ಸಂಯೋಜಕ ಗುಣವಂತರಾವ್ ಪಾಟೀಲ, ಬಳ್ಳಾರಿಯ ವೀರಶಿವಾಜಿ ಸಂಘಟನೆ ರಾಜ್ಯ ಸಂಯೋಜಕ ವಿನೋದ ಚವ್ಹಾಣ, ಶಿವಾಜಿರಾವ್ ಪಾಟೀಲ, ಮಂಜುನಾಥ ಕದಂ, ಬಸವರಾಜ ಜಾಧವ, ಶಂಕರ ಶೆಳಕೆ, ಶ್ಯಾಮಸುಂದರ ಗಾಯಕವಾಡ, ಭೀಮಪ್ಪ ಕಾಸಾಯಿ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ನಿಗಮ ಅಥವಾ ಪ್ರಾಧಿಕಾರ ಆಗಿದ್ದಕ್ಕೆ ಸರ್ಕಾರದ ಆದೇಶ ಇಲ್ಲ, ಅಧ್ಯಕ್ಷರಿಲ್ಲ. ಇದಕ್ಕೆ ಕಾನೂನು ಆಗಬೇಕು ಅಥವಾ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಬೇಕು. ಹಿಂದಿನ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಮರಾಠಿಗರ ಸಂಸ್ಕೃತಿಯ ಅಧ್ಯಯನಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಾಹು ಮಹಾರಾಜರ ಅಧ್ಯಯನ ಪೀಠ ಘೋಷಣೆಯಾಗಿತ್ತು. ಅದರೆ, ಅನುದಾನ ಬಿಡುಗಡೆಯಾಗದೆ ಪೀಠ ಆರಂಭವಾಗಿಲ್ಲ.| ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯ