ಜಿಲ್ಲೆ

ನಿಗದಿತ ಸಮಯಕ್ಕೆ ಕಬ್ಬಿನ ಹಣ ಪಾವತಿಸಿ

ಕೆ.ಎಂ.ದೊಡ್ಡಿ: ಕಬ್ಬು ಸರಬರಾಜು ಮಾಡಿದ ರೈತರಿಗೆ ನಿಗದಿತ ಸಮಯದಲ್ಲಿ ಹಣ ಪಾವತಿಸಿ ಎಂದು ಶಾಸಕ ಕದಲೂರು ಉದಯ್ ಸಲಹೆ ನೀಡಿದರು.


ಇಲ್ಲಿನ ಚಾಂಶುಗರ್ಸ್‌ ಕಾರ್ಖಾನೆಗೆ ಭೇಟಿ ನೀಡಿದ ಅವರು, ಕೋಜನ್ ಘಟಕ, ಕಬ್ಬು ಅರೆಯುವ ಯಂತ್ರ, ಸಕ್ಕರೆ ತಯಾರಿಕೆ ಘಟಕ, ಮದ್ಯಸಾರ ಘಟಕಗಳನ್ನು ವೀಕ್ಷಿಸಿದ ಬಳಿಕ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದರು. ಕಬ್ಬು ಪೂರೈಕೆ ಮಾಡುವ ರೈತರಿಗೆ ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡಲು ಕ್ರಮ ವಹಿಸಿ. ಕಾರ್ಖಾನೆಯಲ್ಲಿ ಮೊದಲೆಲ್ಲಾ ಎರಡು ಮೂರು ತಿಂಗಳಿಗೆ ಒಮ್ಮೆ ಕಬ್ಬಿನ ಹಣ ಪಾವತಿಯಾಗುತ್ತಿತ್ತು. ಈಗ ಆಡಳಿತ ಮಂಡಳಿ ರೈತರ ಕಷ್ಟವನ್ನು ಮನಗಂಡು ನಿಗದಿತ ಸಮಯಕ್ಕೆ ಹಣ ಬಿಡುಗಡೆ ಮಾಡುತ್ತಿರುವುದು ಸ್ವಾಗತಾರ್ಹ. ಕಾರ್ಖಾನೆ ಮತ್ತು ರೈತರ ನಡುವೆ ಉತ್ತಮ ಬಾಂಧವ್ಯ ಸಾಧಿಸಿ. ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಹೆಚ್ಚು ಆದಾಯ ಸಿಗಲಿ ಎಂದು ಆಶಿಸಿದರು.


ಕಳೆದ ಬಾರಿ 10 ಲಕ್ಷ ಟನ್ ಕಬ್ಬು ಅರೆದು ದಾಖಾಲೆ ನಿರ್ಮಾಣ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಹೆಚ್ಚು ಕಬ್ಬು ಅರೆಯುವ ಮೂಲಕ ರೈತರಿಗೆ ಅರ್ಥಿಕವಾಗಿ ನೆರವಾಗಲು ಆಡಳಿತ ಮಂಡಳಿ ಕ್ರಮ ವಹಿಸಲಿ. ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಶ್ರಮದಿಂದ ಈ ಭಾಗದಲ್ಲಿ ಕಾರ್ಖಾನೆ ತಲೆ ಎತ್ತಿದ್ದು, ಇದರಿಂದ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿದೆ. ರೈತರು ಆರ್ಥಿಕ ಪ್ರಗತಿ ಸಾಧಿಸಲು ಕಾರಣವಾಗಿದ್ದು ರೈತರೊಂದಿಗೆ ಆಡಳಿತ ಮಂಡಳಿ ಉತ್ತಮ ಬಾಂಧವ್ಯ ಬೆಸೆಯಲಿ ಎಂದರು.

ಇದೇ ವೇಳೆ ಶಾಸಕ ಕದಲೂರು ಉದಯ್ ಅವರನ್ನು ಆಡಳಿತ ಮಂಡಳಿಯ ಪರವಾಗಿ ಉಪಾಧ್ಯಕ್ಷ ಆರ್.ಮಣಿ, ನೌಕರರ ಸಂಘದ ಅಧ್ಯಕ್ಷ ಶಿಂಗಟಗೆರೆ ಸಿದ್ದರಾಜು ಮತ್ತು ಕಾರ್ಯದರ್ಶಿ ಸಿದ್ದರಾಮು ಅಭಿನಂಧಿಸಿದರು. ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಪ್ರಧಾನ ವ್ಯವಸ್ಥಾಪಕ ಸೆಂಥಿಲ್‌ಕುಮಾರ್, ವ್ಯವಸ್ಥಾಪಕ ಎಂ.ರವಿ, ಅಧಿಕಾರಿಗಳಾದ ನಿತೀಶ್, ನಿಂಗಯ್ಯ ಇದ್ದರು.


ಸಕ್ಕರೆ ಕಾರ್ಖಾನೆಗೆ ಕೂಲಿ ಕಾರ್ಮಿಕರು, ರೈತರು ಆಗಮಿಸುತ್ತಾರೆ. ಇವರಿಗೆಲ್ಲ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಕೆ.ಎಂ.ದೊಡ್ಡಿಯಲ್ಲಿ ನಿರ್ಮಾಣ ಮಾಡಿಕೊಡಲು ಕ್ರಮ ವಹಿಸುತ್ತೇನೆ.
ಕದಲೂರು ಉದಯ್, ಶಾಸಕ