ಜಿಲ್ಲೆ

ನಿಗದಿತ ಮೆನು ಪ್ರಕಾರ ಆಹಾರ ತಯಾರಿಸಿ

ಕಾನಹೊಸಹಳ್ಳಿ: ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂರು ಹಾಸ್ಟೆಲ್‌ಗಳಿಗೆ ಇಲಾಖೆಯ ತಾಲೂಕು ಅಧಿಕಾರಿ ಶ್ಯಾಮಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಬಾಲಕರ ಮೆಟ್ರಿಕ್ ಪೂರ್ವ, ಬಾಲಕಿಯರ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಅಡುಗೆ ಕೋಣೆ, ಸೊಪ್ಪು, ತರಕಾರಿ, ದಿನಸಿ ಸಾಮಗ್ರಿಗಳು, ಶೌಚಗೃಹ, ವಸತಿ ಕೊಠಡಿಗಳನ್ನು ಪರಿಶೀಲಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಅಡುಗೆ ತಯಾರಿಕೆಗೆ ಮುನ್ನ ಸೊಪ್ಪು, ತರಕಾರಿಗಳನ್ನು ನೀರಿನಲ್ಲಿ ತೊಳೆಯಬೇಕು. ಇಲಾಖೆ ನಿಗದಿಪಡಿಸಿದ ಮೆನು ಪ್ರಕಾರ ಅಡುಗೆ ತಯಾರಿಸಬೇಕು ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಬಗ್ಗೆ ಗಮನಹರಿಸಬೇಕೆಂದು ನಿಲಯ ಮೇಲ್ವಿಚಾರಕರಿಗೆ ತಿಳಿಸಿದರು.

ಕರೇಕಲ್ಲು ಪ್ರದೇಶದಲ್ಲಿರುವ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗಿಡ, ಮರಗಳು, ಅಲಂಕಾರಿಕ ಸಾಮಗ್ರಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿವೆ ಎಂದು ಶ್ಲಾಘಿಸಿದರು.

ವಸತಿನಿಲಯದ ಮೇಲ್ವಿಚಾರಕರಾದ ಸಹನಾ, ರಾಚಪ್ಪ, ಸುಮಾ, ಕುಮಾರಸ್ವಾಮಿ, ಅಡುಗೆ ಸಿಬ್ಬಂದಿ ಇದ್ದರು.