ಜಿಲ್ಲೆ

ನಿಗದಿತ ಗುರಿ ಸಾಧನೆಗೆ ಹಿನ್ನಡೆ

ರಾಜೇಂದ್ರ ಶಿಂಗನಮನೆ ಶಿರಸಿ

ಏರುತ್ತಿರುವ ಜನಸಂಖ್ಯೆ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೀಗ, ಕರೊನಾ ಕಾರಣದಿಂದಾಗಿ ಕೆಲವರು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ಸಂತಾನ ನಿಯಂತ್ರಣಕ್ಕಾಗಿ ಶಾಶ್ವತ ಹಾಗೂ ತಾತ್ಕಾಲಿಕ ಚಿಕಿತ್ಸೆಗಳಿವೆ. ಆದರೆ, ಸತತ ಎರಡು ವರ್ಷಗಳಿಂದ ಕಾಡುತ್ತಿರುವ ಕರೊನಾದಿಂದ ಸಂತಾನಶಕ್ತಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹೆಚ್ಚಿನ ದಂಪತಿ ಮುಂದೆ ಬರುತ್ತಿಲ್ಲ.

2020-21ನೇ ಸಾಲಿನಲ್ಲಿ ಕೋವಿಡ್ ಮೊದಲ ಅಲೆ ಕಂಡುಬಂತು. ಈ ವರ್ಷ ಎರಡನೇ ಅಲೆಯ ರೂಪದಲ್ಲಿ ಸೋಂಕು ಮುಂದುವರಿದಿದೆ. ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಸೋಂಕಿತರಿಗೆಂದೇ ಪ್ರತ್ಯೇಕ ವಾರ್ಡ್ ಹಾಗೂ ಬೆಡ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕು ತಮಗೂ ಹರಡಲಿದೆ ಎಂಬ ಭಯದಿಂದ ಹಲವು ದಂಪತಿ, ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮುಂದೂಡುತ್ತಿದ್ದಾರೆ.

ಮೂರು ವಿಧಧ ಶಸ್ತ್ರಚಿಕಿತ್ಸೆ: ಸಂತಾನೋತ್ಪತ್ತಿ ತಡೆಯಲು ಕುಟುಂಬ ಕಲ್ಯಾಣ ಯೋಜನೆಯಡಿ ಪುರುಷರಿಗೆ ವ್ಯಾಸೆಕ್ಟಮಿ, ಮಹಿಳೆಯರಿಗೆ ಟ್ಯೂಬೆಕ್ಟಮಿ, ಲ್ಯಾಪೊ›ಸ್ಕೊಪಿಕ್ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಜನಸಂಖ್ಯೆ ನಿಯಂತ್ರಣಕ್ಕೆ ಉತ್ತೇಜಿಸಲಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಫಲಾನುಭವಿಗಳಿಗೆ ಸೂಕ್ತ ಪ್ರೋತ್ಸಾಹ ಧನವನ್ನೂ ವಿತರಿಸುತ್ತಿದೆ.

ಹಿಂದಿನ ವರ್ಷದ ಸಾಧನೆಯ ನೋಟ: ಕೋವಿಡ್-19 ಪೂರ್ವದ 2018-19ನೇ ಸಾಲಿನಲ್ಲಿ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಅಂದಾಜು 5 ಸಾವಿರ ಗುರಿ ನಿಗದಿಪಡಿಸಲಾಗಿತ್ತು. ವರ್ಷಾಂತ್ಯದಲ್ಲಿ 4 ಸಾವಿರ ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2019-20ನೇ ಸಾಲಿನಲ್ಲಿ ಕೂಡ ಉತ್ತಮ ಸಾಧನೆಯಾಗಿತ್ತು.

ಕರೊನಾ ಮೊದಲನೇ ಅಲೆ ನಡುವೆಯೂ 2020-21ನೇ ಸಾಲಿನಲ್ಲಿ 3,670 ಮಹಿಳೆಯರಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಈ ಬಾರಿ ಕೋವಿಡ್ 2ನೇ ಅಲೆ ಪ್ರಭಾವ ಹೆಚ್ಚಿರುವ ಕಾರಣ ಜಿಲ್ಲೆಯ ಶಿರಾಲಿ, ಹೊನ್ನಾವರ, ಕುಮಟಾ, ಯಲ್ಲಾಪುರದಲ್ಲಿ ಶಿಬಿರ ಆಯೋಜಿಸಿ 55 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮುಂಡಗೋಡದಲ್ಲಿ ಕರೊನಾ ಕಾರಣಕ್ಕೆ ಶಿಬಿರ ರದ್ದು ಮಾಡಲಾಗಿದೆ.

ಇಲಾಖೆಯಿಂದ ನಿರಂತರ ಜಾಗೃತಿ: ಪ್ರಸಕ್ತ ವರ್ಷವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಿ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಹೆಚ್ಚು ಜನರನ್ನು ಪ್ರೋತ್ಸಾಹಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಕೋವಿಡ್ ಸೋಂಕಿತರು ಹಾಗೂ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ.

ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ಮುಂದೆ ಬಾರದಿದ್ದಾಗ, ತಾತ್ಕಾಲಿಕ ಚಿಕಿತ್ಸೆಗೆ ಒತ್ತು ನೀಡಲಾಗುತ್ತಿದೆ. ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವುದು, ಮಾತ್ರೆ ಸೇವಿಸುವುದು ಸೇರಿ ನಾನಾ ವಿಧಾನಗಳ ಮೂಲಕ ಸಂತಾನೋತ್ಪತ್ತಿ ಮುಂದೂಡುವ ಪದ್ಧತಿ ಅನುಸರಿಸಲಾಗುತ್ತಿದೆ. ಕೋವಿಡ್ ಮುಗಿದ ಬಳಿಕ ಸಂತಾನ ತಡೆ ಶಸ್ತ್ರ ಚಿಕಿತ್ಸೆ ಮುಂದುವರಿಸಲಾಗುತ್ತದೆ ಎನ್ನುತ್ತವೆ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಮೂಲಗಳು.

ಕೋವಿಡ್ ಸೋಂಕಿನ ಭಯದಿಂದ ಸಂತಾನ ತಡೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಅರ್ಹ ದಂಪತಿ ಮುಂದೆ ಬರುತ್ತಿಲ್ಲ. ಇದರ ಜತೆಗೆ ಆರೋಗ್ಯ ಸಿಬ್ಬಂದಿ ಕರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಜತೆಗೆ, ಕರೊನಾ ವ್ಯಾಪಕವಾಗಿರುವ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಆಗುತ್ತಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಭಯ ಹೋಗಲಾಡಿಸುವ ಪ್ರಯತ್ನ ಮುಂದುವರಿದಿದೆ. ಈ ಮಧ್ಯೆ ತಾತ್ಕಾಲಿಕ ಚಿಕಿತ್ಸೆ ಒದಗಿಸಲಾಗುತ್ತಿದೆ.| ಅನ್ನಪೂರ್ಣ ವಸ್ತ್ರದಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ