ಹನೂರು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ಧೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಅವರು ಶನಿವಾರ ಸಂಜೆ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅಗತ್ಯ ಸಲಹೆ ಮತ್ತು ಮಾಗದರ್ಶನ ನೀಡಿದರಲ್ಲದೆ, ನಕ್ಕುಂದಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲು ಆರಂಭಿಸಿದ ಬಿಇಒ, ಮಿಣ್ಯಂ, ನಕ್ಕುಂದಿ, ಗಾಜನೂರು, ಕೊಪ್ಪ ಹಾಗೂ ಆ ಭಾಗದ ಇತರ ಗ್ರಾಮಗಳಿಗೆ ಆಯಾ ಶಾಲಾ ಶಿಕ್ಷಕರೊಂದಿಗೆ ಭೇಟಿ ನೀಡಿದರು. ಈ ವೇಳೆ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿವೀಕ್ಷಿಸಿ ಮಾರ್ಗದರ್ಶನ ನೀಡಿದರು.
ಮಕ್ಕಳಿಗೆ ಪ್ರೋತ್ಸಾಹ ನೀಡಿ: ಯಾವುದೇ ಕಾರಣಕ್ಕೂ ಪರೀಕ್ಷೆ ಭಯ ಬೇಡ. ಈಗಿನಿಂದಲೇ ವಿಷಯವಾರು ವೇಳಾ ಪಟ್ಟಿಯನ್ನು ತಯಾರಿಸಿಕೊಂಡು ಓದಿನ ಜತೆಗೆ ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಬೇಕು. ವಿಷಯ ಸಂಬಂಧಿತ ಸಮಸ್ಯೆ ಇದ್ದಲ್ಲಿ ಆಯಾ ಶಿಕ್ಷಕರಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ವಿನಾಕಾರಣ ಶಾಲೆಗೆ ಗೈರಾಗಬಾರದು. ಇದರಿಂದ ಕಲಿಕೆ ಕುಂಠಿತಗೊಳ್ಳುತ್ತದೆ. ಈ ಬಗ್ಗೆ ಪಾಲಕರು ವಿದ್ಯಾರ್ಥಿಗಳಿಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಬಿಇಒ ಸಲಹೆ ನೀಡಿದರು.
ಪಠ್ಯ ವಿಷಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಶಾಲೆಯಲ್ಲಿ ಗುಂಪು ಅಧ್ಯಯನ, ವಿಶೇಷ ತರಗತಿಯನ್ನು ಕೈಗೊಳ್ಳಬೇಕು. ಬುದ್ಧಿಶಕ್ತಿ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಪರೀಕ್ಷೆಯಲ್ಲಿ ಅನುಸರಿಸುವ ಸರಳ ತಂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಶಾಲೆಯಿಂದ ಹೊರಗುಳಿದ ಹಾಗೂ ಆಗಾಗ್ಗೆ ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಬಿಇಒ ಶಿಕ್ಷಣದ ಮಹತ್ವದ ಬಗ್ಗೆ ಪಾಲಕರಿಗೆ ತಿಳಿಸಿ ಕೊಡುವುದರ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಗಾಜನೂರು ಶಾಲೆಯಲ್ಲಿ ಗ್ರಾಮಸ್ಥರ ಸಭೆ ಆಯೋಜಿಸಿ ಶಾಲಾ ಆಸ್ತಿಯ ಸಮಸ್ಯೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಶಾಲಾ ವಾಸ್ತವ್ಯ: ರಾತ್ರಿ ನಕ್ಕುಂದಿ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲೇ ವಾಸ್ತವ್ಯ ಹೂಡಿದ ಬಿಇಒ, ಅಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿ, ಪಠ್ಯೇತರ ಚಟುವಟಿಕೆಗಳ ಸಾಧನೆ, ಗುಣಮಟ್ಟದ ಆಹಾರ ವಿತರಣೆ, ಶಾಲೆಯ ಸ್ವಚ್ಛತೆ ಹಾಗೂ ಶೈಕ್ಷಣಿಕ ಆಡಳಿತ ಕುರಿತು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಶಿಕ್ಷಣ ಸಂಯೋಜಕ ಕಂದವೇಲು, ಸಿಆರ್‌ಪಿ ಷಣ್ಮುಗಂ, ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ಹರ್ಷ, ದಿನೇಶ್, ನಾಗರಾಜು ಇತರರು ಇದ್ದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿವೀಕ್ಷಣೆ, ಅಗತ್ಯ ಮಾರ್ಗದರ್ಶನ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆ ತರುವ ಸಲುವಾಗಿ ಪ್ರತಿ ಶುಕ್ರವಾರ ಶಾಲಾ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಸದ್ಯ ಕಾಡಂಚಿನ ಹಾಗೂ ಗಡಿ ಭಾಗದ ಶಾಲೆಗಳಲ್ಲಿ ವಾಸ್ಯವ್ಯ ಹೂಡಲು ನಿರ್ಧರಿಸಲಾಗಿದೆ.
ಶಿವರಾಜು, ಬಿಇಒ ಹನೂರು