ಹುಬ್ಬಳ್ಳಿ: 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕಾಮಗಾರಿ ಈ ಹಿಂದೆಯೇ ಆಗಬೇಕಿತ್ತು. ಇದೀಗ ಜನರ ಬಹು ದಿನಗಳ ಆಸೆ ಈಗ ಈಡೇರುತ್ತಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಉಣಕಲ್ ಕ್ರಾಸ್ನಿಂದ ಸಾಯಿನಗರದ ಮೂಲಕ ಹೆಬ್ಬಳ್ಳಿ ಮಾರ್ಗದ ರೈಲ್ವೆ ಗೇಟ್ವರೆಗೆ ಹಾಗೂ ಸಾಯಿನಗರದಿಂದ ಉಣಕಲ್ನ ಪ್ರೆಸಿಡೆಂಟ್ ಹೋಟೆಲ್ವರೆಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನರಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡಲಾಗುತ್ತಿದೆ. ಗಬ್ಬೂರಿನಿಂದ ನರೇಂದ್ರವರೆಗಿನ ಬೈಪಾಸ್ ರಸ್ತೆಯನ್ನು ರಸ್ತೆಯನ್ನು 6 ಪಥ ಮಾಡಲಾಗುವುದು. ಆದರೆ, ಈ ಬೈಪಾಸ್ಗೆ ಟೋಲ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ಹುಬ್ಬಳ್ಳಿ - ಧಾರವಾಡ ಮಧ್ಯೆ ನಿರಾಳವಾಗಿ ಸಂಚಾರ ಮಾಡಬಹುದು. ಬೈಪಾಸ್ ರಸ್ತೆಯ ಟೆಂಡರ್ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘ಉಣಕಲ್ ಕ್ರಾಸ್ನಿಂದ ಸಾಯಿನಗರ ವೃತ್ತ, ಚರ್ಚ್ ರಸ್ತೆ, ಪ್ರೆಸಿಡೆಂಟ್ ಹೋಟೆಲ್ವರೆಗೆ ಮತ್ತು ಹೆಬ್ಬಳ್ಳಿ ರೈಲ್ವೆ ಗೇಟ್ವರೆಗೆ ಕಾಂಕ್ರೀಟ್ ರಸ್ತೆ ನಿಮಾಣ ಮಾಡಲಾಗುವುದು. ರಸ್ತೆ ಅಗಲೀಕರಣ ಆಗುವುದರಿಂದ ಜನರು ಸಹಕಾರ ನೀಡಬೇಕು’ ಎಂದರು.
ರಿಂಗ್ ರೋಡ್ ಕಾಮಗಾರಿ ಮುಗಿದಿದೆ. ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಮಾಜಿ ಮೇಯರ್ ಅಶ್ವಿನಿ ಮಜ್ಜಗಿ, ಪ್ರಮುಖರಾದ ಈಶ್ವರಗೌಡ ಪಾಟೀಲ, ಚನ್ನು ಪಾಟೀಲ, ಮಾಲತೇಶ ನೀಲಣ್ಣವರ, ಶಿವು ಪಾಟೀಲ, ಬಾಬು ವಟಗಿ, ಕಲ್ಲಪ್ಪ ಬಾದಾಮಿ ಹಾಗೂ ಇತರರು ಇದ್ದರು.