ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಖಾನಾಪೂರದಿಂದ ಗದ್ದನಕೇರಿ ಕ್ರಾಸ್‍ವರೆಗೆ ನ್ಯಾಷನಲ್ ಹೈವೆ 367ಗೆ ಸಂಬಂಧಿಸಿದಂತೆ ಬಾಗಲಕೋಟೆ ವ್ಯಾಪ್ತಿಗೆ ಬರುವ 71 ರಿಂದ 156 ಕಿ.ಮೀದಲ್ಲಿ 71 ರಿಂದ 104 ಕಿ.ಮೀ ವರೆಗಿನ ಸರ್ಜಾಪೂರದಿಂದ ಪಟ್ಟದಕಲ್ಲವರೆಗಿನ 25 ಕಿ.ಮೀ ರಸ್ತೆ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದರು.
ಸರ್ಜಾಪೂರದಿಂದ ಪಟ್ಟದಕಲ್ಲವರೆಗೆ ಇರುವ 25 ಕಿ.ಮೀ ರಸ್ತೆ ಕಾಮಗಾರಿಯಲ್ಲಿ ಶೇ.50 ರಷ್ಟು ಅಂದರೆ 12 ಕಿ.ಮೀ ರಸ್ತೆ ಪೂರ್ಣಗೊಳಿಸಲಾಗಿದೆ. ಅರಣ್ಯ ಜಾಗವಾಗಿರುವದರಿಂದ ಅವರಿಂದ ಎನ್.ಓ.ಸಿ ಬಂದಿರುವದಿಲ್ಲ. ಇದರಿಂದ ಬಾಕಿ ಕಾಮಗಾರಿಯಲ್ಲಿ ವಿಳಂಬವಾಗಿದೆ. ಅಲ್ಲದೆ ರಸ್ತೆ ಮದ್ಯ ಸೇತುವೆ ನಿರ್ಮಾಣ ಕಾಮಗಾರಿ ಬಂದಿದ್ದರಿಂದ ಇದು ಸಹ ವಿಳಂಬಕ್ಕೆ ಕಾರಣವಾಗಿರುವುದಾಗಿ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್.ಪಾಟೀಲ ಸಭೆಗೆ ತಿಳಿಸಿದರು. ಅರಣ್ಯ ಇಲಾಖೆಗೆ ಸಂಬಂಧಿಸಿದ ಎನ್.ಓ.ಸಿಗಳು ಬೇಗನೇ ಸಿಗುವಂತೆ ಕ್ರಮವಹಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್‍ಗೆ ಸಂಸದರು ಸೂಚನೆ ನೀಡಿದರು.
ಪಟ್ಟದಕಲ್ಲದಿಂದ ಶಿರೂರ ವರೆಗಿನ 104 ರಿಂದ 133 ವರೆಗಿನ 25 ಕಿ.ಮೀ ರಸ್ತೆ ಕಾಮಗಾರಿಯಲ್ಲಿ ವಿಳಂಬಕ್ಕೆ ಅರಣ್ಯ ಇಲಾಖೆಯ ಬೇಗನೇ ಅನುಮತಿ ಸಿಗದ ಕಾರಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ 133 ರಿಂದ 156 ಕಿ.ಮೀ ಕಾಮಗಾರಿಯಲ್ಲಿ ಶೇ.80 ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಕಾಮಗಾರಿಗೆ ಭೂ ಸ್ವಾಧೀನ, ರೈಲ್ವೆ ಮೇಲ್ಸೆತುವೆ ನಿರ್ಮಾಣ ಹಾಗೂ ಚರಂಡಿ ಇರುವ ಹಿನ್ನಲೆಯಲ್ಲಿ ವಿಳಂಬವಾಗಿದೆ ಎಂದು ಸಂಬಂಧಿಸಿದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದರು. ಸಮಸ್ಯೆ ಇರದ ಜಾಗದಲ್ಲಾದರೂ ಕಾಮಗಾರಿ ಪ್ರಾರಂಭಿಸುವಂತೆ ಸಂಸದ ಗದ್ದಿಗೌಡರ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ವಿಜಯಪುರ ವಿಭಾಗದ ವಿಜಯ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಗಿರೀಶ ಯಲಮಾರ್ಗ, ವಿವೇಕ ಮಠ ಹಾಗೂ ಇತರರು ಉಪಸ್ಥಿತರಿದ್ದರು.