ಕಡೂರು: ಅನುದಾನ ತರುವುದು ನನ್ನ ಕಾರ್ಯ. ಕಾಮಗಾರಿಗಳು ಗುಣಮಟ್ಟದೊಡನೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದು. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಹಣವಿಲ್ಲ ಎಂಬುದು ಸರಿಯಲ್ಲ. ಈಗ ನಡೆಯುತ್ತಿರುವ ಕಾಮಗಾರಿಗಳು ಶೀಘ್ರ ಪೂರ್ಣವಾಗುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಆಗ ಅಭಿವೃದ್ಧಿ ಕಾರ್ಯಗಳು ಬೆಳಕಿಗೆ ಬರುತ್ತವೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಪಂನಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಅರ್ಹರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡಬೇಕು. ಅತಿವೃಷ್ಟಿ ಸಂಬಂಧಿತ ಕಾರ್ಯಗಳನ್ನು ಕೂಡಲೆ ಪೂರ್ಣಗೊಳಿಸಬೇಕು. ಹಂಪಾಪುರ ಬಳಿ ಭೋವಿ ಕಾಲನಿ ಸಮೀಪವಿರುವ 12 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಎಮ್ಮೆದೊಡ್ಡಿ ಪ್ರದೇಶದಲ್ಲಿ ಕೆಲವೆಡೆ ಪಡಿತರ ವಿತರಣೆಯಲ್ಲಿ ಆಗಿರುವ ಗೊಂದಲಗಳನ್ನು ಪರಿಹರಿಸಬೇಕು ಎಂದು ತಾಕೀತು ಮಾಡಿದರು.
ಟಿಎಪಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದೆ. ಆರ್.ಜಿ.ಕೊಪ್ಪಲು, ಬಳ್ಳೇಕೆರೆ ಸೇರಿದಂತೆ ವಿವಿಧೆಡೆ ಮಂಗಗಳ ಹಾವಳಿ ಹೆಚ್ಚಾಗಿದೆ. ಚಿರತೆಗಳನ್ನು ಸೆರೆಹಿಡಿಯಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಲ್ಲಿ ಅವೈಜ್ಞಾನಿಕವಾಗಿ ಪೈಪ್ ಅಳವಡಿಸುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಕೊಡಬೇಕಿದೆ ಎಂದು ಒತ್ತಾಯಿಸಿದರು.
ಬಿಇಒ ಆರ್.ಸಿದ್ದರಾಜುನಾಯ್ಕ ಮಾತನಾಡಿ, ಕಳೆದ ಸಾಲಿನಲ್ಲಿ ಶೇ.100ಕ್ಕಿಂತ ಕಡಿಮೆ ಫಲಿತಾಂಶ ಬಂದ 51 ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ಮಾಡಲಾಗಿದೆ. ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳತ್ತ ವಿಶೇಷ ಗಮನಹರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. 2024-25ನೇ ಸಾಲಿನ 15 ಶಾಲೆಗಳ ದುರಸ್ತಿಗೆ ಎಸ್‌ಸಿಪಿ ಯೋಜನೆಯಡಿ ಹಣ ಬಿಡುಗಡೆಯಾಗಿ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಖಾಸಗಿ ಶಾಲೆ ಮಕ್ಕಳು ಕಡ್ಡಾಯವಾಗಿ ಭಾಗವಹಿಸುವಂತೆ ಖಾಸಗಿ ಶಾಲೆಗಳಿಗೆ ಸೂಚಿಸಬೇಕಿದೆ. ಭಾಗವಹಿಸದ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡುವಂತೆ ಬಿಇಒ ಅವರಿಗೆ ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಅಶೋಕ್ ಮಾತನಾಡಿ, ಇಲಾಖೆಗೆ ಹೊಸ ಕಟ್ಟಡದ ಅವಶ್ಯಕತೆ ಇದ್ದು, ಎಪಿಎಂಸಿ ಆವರಣದಲ್ಲಿ ನಿವೇಶನ ಲಭ್ಯವಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇದೆ. ಬೀರೂರು, ಸಿಂಗಟಗೆರೆ ರೈತ ಸಂಪರ್ಕ ಕೇಂದ್ರಗಳ ಕಟ್ಟಡದ ದುರಸ್ತಿಗೆ 1 ಲಕ್ಷ ರೂ. ಬಿಡುಗಡೆಯಾಗಿದೆ. ಕೃಷಿಹೊಂಡ ನಿರ್ಮಾಣ ಪ್ರಗತಿಯಲ್ಲಿದ್ದು, ಶೇ.107 ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು ಪೂರ್ಣಗೊಂಡಿವೆ. ಕೃಷಿ ಭಾಗ್ಯ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ.ಜಯದೇವಪ್ಪ ಮಾತನಾಡಿ, ಈ ಬಾರಿ 1304 ರೈತರು 76.91 ಲಕ್ಷ ವಿಮೆ ಹಣ ಪಾವತಿಸಿದ್ದರು. ಅವರಿಗೆ 954 ಲಕ್ಷ ವಿಮೆ ಹಣ ಬಂದಿದೆ. ಒಟ್ಟು 13.7 ಕೋಟಿ ಹಣ ವಿವಿಧ ಯೋಜನೆಗಳ ಕೃಷಿ ಪ್ರೋತ್ಸಾಹ ಧನ ನೀಡುವ ಗುರಿಯಿದ್ದು, 3847 ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಕಡೂರು-ಚಿಕ್ಕಮಗಳೂರು ಹೆದ್ದಾರಿ ಮಾರ್ಗದ ಪಕ್ಕ ಸಮರ್ಪಕವಾಗಿ ಗಿಡಗಳನ್ನು ನೆಡುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಹಾಗೂ ದೂರದ ಮಾರ್ಗಗಳ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಡಿಮೆಗೊಳಿಸಿ ಹೊಸ ಮಾರ್ಗದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಬಸ್‌ಗಳು ಸಂಚರಿಸುವಂತೆ ಕೆಎಸ್‌ಆರ್‌ಟಿಸಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು. ಭೂಸೇನಾ ನಿಗಮದಡಿ ನಡೆಯುತ್ತಿರುವ ಕಾಮಗಾರಿಗಳು, ಮೆಸ್ಕಾಂ, ಆಹಾರ ಇಲಾಖೆ, ಪಿಎಂಜಿಎಸ್‌ವೈ, ಅರಣ್ಯ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಮುಂದಿನ ದಿನಗಳಲ್ಲಿ ತಾಪಂ ಮತ್ತು ಕಂದಾಯ ಇಲಾಖೆಯ ಪ್ರಗತಿ ಸಭೆಯನ್ನು ಪ್ರತ್ಯೇಕವಾಗಿ ನಡೆಸಲು ಸಭೆ ತೀರ್ಮಾನಿಸಿತು.
ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಕಾರ್ಮಿಕ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್ ಇದ್ದರು.