ಹುಕ್ಕೇರಿ: ಸೌಮ್ಯ ಸ್ವಭಾವದ ಯುವಕ ನಿಖಿಲ ಕತ್ತಿ ಪರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಗನಂತೆ ಭಾವಿಸಿ ಆತನ ಆಯ್ಕೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಬಿಜೆಪಿ ಸ್ಟಾರ್ ಪ್ರಚಾರಕ ಡಾ.ಪ್ರಭಾಕರ ಕೋರೆ ಹೇಳಿದರು.
ಪಟ್ಟಣದ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ ಶಾಖೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಂದೆ ಉಮೇಶ ಕತ್ತಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಪರ ಆಡಳಿತ ಜನರ ಮನಸ್ಸಿನಲ್ಲಿದ್ದು, ನಿಖಿಲನನ್ನು ಭವಿಷ್ಯದ ನಾಯಕನನ್ನಾಗಿ ರೂಪಿಸಬೇಕಿದೆ. ಹುಕ್ಕೇರಿ ಜನರು ಮೂಲತಃ ಕಾಂಗ್ರೆಸ್ ವಿರೋಧಿಯಾಗಿದ್ದಾರೆ.
ಉಮೇಶ ಕತ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸೋಲನುಭವಿಸಿದ್ದೇ ಇದಕ್ಕೆ ಸಾಕ್ಷಿ. ತಂದೆಯ ಸ್ಥಾನ ತುಂಬಲು ನಿಖಿಲ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ಪಕ್ಷಕ್ಕೆ ವಿಶೇಷ ಬೂಸ್ಟರ್ ಡೋಸ್ ನೀಡಲಿದ್ದು, ನಿಖಿಲ ಗೆಲ್ಲಿಸಿಕೊಂಡು ಬರುವ ತಾಕತ್ತು ಮುಖಂಡರ ಕೈಯಲ್ಲಿದೆ ಎಂದರು.
ಸಂಗಮ ಶುಗರ್ಸ್ ಚೇರ್ಮನ್ ರಾಜೇಂದ್ರ ಪಾಟೀಲ ಮಾತನಾಡಿ, ಮಾಜಿ ಸಚಿವ ಉಮೇಶ ಕತ್ತಿ ಹಿಡಕಲ್ ಜಲಾಶಯದ ಬಳಿ ನೂರಾರು ಕೋಟಿ ರೂ. ವೆಚ್ಚದ ಉದ್ಯಾನ ಕಾಶಿ, ಕಣಗಲ ಬಳಿ ಕೈಗಾರಿಕಾ ಪ್ರದೇಶ ಮಂಜೂರಾತಿ ಸೇರಿ ಮೂಲಸೌಕರ್ಯವನ್ನು ಕ್ಷೇತ್ರದ ಜನರಿಗೆ ಸಮರ್ಪಕವಾಗಿ ನೀಡಿದ್ದು, ನಿಖಿಲ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಅಪ್ಪಾಸಾಹೇಬ ಶಿರಕೋಳಿ, ಬಸವರಾಜ ಮಟಗಾರ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ರಾಮದುರ್ಗ ಧನಲಕ್ಷ್ಮೀ ಶುಗರ್ಸ್ ಅಧ್ಯಕ್ಷ ಮಲ್ಲಣ್ಣ ಯಾದವಾಡ, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಪಿ.ಚೌಗಲಾ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತ್ತೆಪ್ಪ ನಾಯಿಕ, ರಾಯಪ್ಪ ಡೂಗ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಸುರೇಶ ದೊಡ್ಡಲಿಂಗನವರ, ಸುನೀಲ ಪರ್ವತರಾವ, ಗುರುರಾಜ ಕುಲಕರ್ಣಿ ಸೇರಿ ಇತರರಿದ್ದರು.
12ರಲ್ಲಿ ಗೆಲುವು: ಜಿಲ್ಲೆಯ 18 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಅದರಲ್ಲಿ ಹುಕ್ಕೇರಿಯೂ ಸೇರಿದೆ. ರಾಜ್ಯದಲ್ಲಿ 130ಕ್ಕೂ ಅಧಿಕ ಸ್ಥಾನ ಗೆದ್ದು ಮರಳಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ. ಚಿಕ್ಕೋಡಿಯಲ್ಲಿ ಬಿಜೆಪಿ 50/50 ಇದ್ದರೂ, ಹೆಚ್ಚಿನ ಶ್ರಮ ಹಾಕಿದರೆ ಗೆಲುವು ಸಾಧ್ಯ ಎಂದು ಕೋರೆ ಹೇಳಿದರು.