ಜಿಲ್ಲೆ

ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು

ಆಲೂರು : ಟೈರ್ ಪಂಚರ್ ಆಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕಣದಹಳ್ಳಿ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ.
ಮೈಸೂರು ಜಿಲ್ಲೆ ಮಾಲುಕೊಪ್ಪಲು ಗ್ರಾಮದ ಪ್ರದೀಪ್ (31), ಚಾಮರಾಜಗರ ಜಿಲ್ಲೆ ಕೊತ್ತಲವಾಡಿ ಗ್ರಾಮದ ಗುರು (19) ಮೃತರು. ಕಾರು ಚಲಾಯಿಸುತ್ತಿದ್ದ ಹಾಸನ ಚನ್ನಪಟ್ಟಣ ನಿವಾಸಿ ಹರ್ಷಿತ್ ಹಾಗು ಮಂಡ್ಯ ಜಿಲ್ಲೆಯ ಹಾದನೂರು ಗ್ರಾಮದ ಹೃತ್ವಿಕ್ ಎಂಬುವವರಿಗೆ ಗಾಯವಾಗಿದೆ.
ಹಾಸನದ ಕೃಷ್ಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ತಾಲ್ಲೂಕಿನ ಹೊನ್ನವಳ್ಳಿ ಹತ್ತಿರ ತೆರೆಯಲಾಗಿರುವ ಹೋಟೆಲ್‌ನ ಪೂಜೆಗಾಗಿ ತೆರಳುತ್ತಿದ್ದರು. ವೇಗದ ಚಾಲನೆ ಹಾಗು ಬೆಳಗಿನ ಜಾವ 4ರ ಕತ್ತಲು ಸಮಯವಾದ್ದರಿಂದ ಅಪಘಾತ ಸಂಭವಿಸಿದೆ.
ಪ್ರದೀಪ್ ಕೃಷ್ಣ ಹೋಟೆಲ್‌ನಲ್ಲಿ ಮ್ಯಾನೇಜರ್ ಹಾಗು ಮೂವರು ವಿವಿಧ ಕೆಲಸ ಮಾಡಿಕೊಂಡಿದ್ದರು. ಗಾಯಾಳುಗಳು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.