ಚನ್ನಪಟ್ಟಣ: ನಾನು ಮತ್ತು ರಾಮಲಿಂಗಾರೆಡ್ಡಿಯವರೇ ನಿಮ್ಮ ಉಸ್ತುವಾರಿಗಳು.., ನಾವೇ ನಿಮ್ಮ ಸೇವಕರು.., ನಾವೇ ನಿಮ್ಮ ಶಾಸಕರು... ನಾವೇ ನಿಮ್ಮ ಮಂತ್ರಿಗಳು.. ನಾವೇ ನಿಮ್ಮ ಸರ್ಕಾರ... ನಿಮಗೆ ಏನು ಬೇಕೋ ಅದನ್ನು ಪಡೆಯಲು ಈ ಚಾನ್ಸ್ ಬಿಡೋಕೆ ಹೋಗಬೇಡಿ...
ತಾಲೂಕಿನ ಅರಳಾಳುಸಂದ್ರ ಗ್ರಾಮ ಕೆಪಿಎಸ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದು ಹೀಗೆ.
ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಾತನೂರು ಕ್ಷೇತ್ರಕ್ಕೆ ಇದೇ ವಿರೂಪಾಕ್ಷಿಪುರ ಹೋಬಳಿ ಸೇರಿತ್ತು. ಕ್ಷೇತ್ರ ವಿಗಂಡಣೆಯಾದ ಮೇಲೆ ನಿಮ್ಮ ದರ್ಶನ ಆಗಿರಲಿಲ್ಲ. ಈಗ ನಿಮ್ಮ ದರ್ಶನ ಭಾಗ್ಯ ಸಿಕ್ಕಿದೆ. ಈ ಹಿಂದೆ ನಾನು ನಿಮ್ಮ ಸೇವೆ ಮಾಡಿದವನು. ಈಗ ಇಲ್ಲಿ ಯಾರು ಎಂಎಲ್ಎ ಇಲ್ಲ, ಖಾಲಿಯಾಗಿದೆ. ನಿಮ್ಮ ಎಲ್ಲ ಸಮಸ್ಯೆ ಬಗೆಹರಿಸಲು ನಿಮ್ಮ ಮನೆಬಾಗಿಲಿಗೆ ಬಂದಿದ್ದೇವೆ. ಸರ್ಕಾರವೇ ನಿಮ್ಮ ಮನೆಬಾಗಿಲಿಗೆ, ನಿಮ್ಮ ಸೇವೆ ಮಾಡಲು ಬಂದಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ನಿಮ್ಮ ಜಮೀನಿನ ಸರ್ವೇ ಆಗಬೇಕಾ?, ಮನೆ ಅಥವಾ ನಿವೇಶನ ಬೇಕಾ?, ಖಾತೆ ಮಾಡಿಕೊಡಬೇಕಾ?, ಸಾಲಬೇಕಾ? ನಿಮಗೆ ಯಾವ ಕೆಲಸ ಮಾಡಿಕೊಡಬೇಕು ಎಂದು ನಿಮ್ಮ ಮನೆಗೆ ಅರ್ಜಿಗಳನ್ನು ಕಳಿಸಿದ್ದೇವೆ. ಯಾರ ಮೇಲೂ ಸ್ಪರ್ಧೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿಗೆ ಬಂದಿರುವುದು ನಿಮ್ಮ ಸೇವೆ ಮಾಡಲು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಕ್ಷೇತ್ರದಲ್ಲಿ 15ಸಾವಿರ ವೋಟ್ ಬಂದಿತ್ತು. ಆ ನಂತರ, ಲೋಕಸಭೆ ಚುನಾವಣೆಯಲ್ಲಿ ನನ್ನ ತಮ್ಮನಿಗೆ 85 ಸಾವಿರ ವೋಟ್ ಕೊಟ್ಟಿದ್ದೀರಿ. ಈ ಹಿನ್ನೆಲೆಯಲ್ಲಿ ನಿಮ್ಮ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಯಾರೇ ಬರಲಿ, ಯಾರೇ ಹೋಗಲಿ, ನಾನು ನಿಮ್ಮ ಮನೆ ಮಗ : ಯಾರೇ ಬರಲಿ, ಯಾರೇ ಹೋಗಲಿ, ನಾನು ನಿಮ್ಮ ಮನೆ ಮಗ. ನೀವು ಇಷ್ಟು ದೊಡ್ಡ ಅವಕಾಶ ಕೊಟ್ಟಿದ್ದೀರಿ. ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದೀರಿ. ನೀವು ಬೆಳೆಸಿದ ಮಗ ಇಂದು ಇಂಥ ಸ್ಥಾನದಲ್ಲಿದ್ದೇನೆ. ನೀವು ಯಾವಾಗ ಬೇಕಾದರೂ ಬಂದು ನನ್ನನ್ನು ಭೇಟಿ ಮಾಡಬಹುದು. ತಾಲೂಕು ಕಚೇರಿಯಲ್ಲಿ ನಿಮ್ಮ ಸಮಸ್ಯೆ ಆಲಿಸಲು ಕೊಠಡಿ ತೆಗೆದಿದ್ದೇವೆ. ಅಲ್ಲೂ ಅರ್ಜಿಗಳನ್ನು ನೀಡಬಹುದು. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಡೋಂಟ್ ವರಿ..! : ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ದುಡ್ಡು ನಿಮಗೆ ಸೇರುತ್ತಿದೆಯಾ ಎಂದು ಮಹಿಳೆಯರನ್ನು ಡಿಸಿಎಂ ಪ್ರಶ್ನಿಸಿದರು. ಈ ವೇಳೆ ಒಂದು ತಿಂಗಳ ಹಣ ಬಂದಿಲ್ಲ ಎಂದು ಮಹಿಳೆಯರು ಪ್ರತಿಕ್ರಿಯಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ, ಡಿಕೆಶಿ, ಡೋಂಟ್‌ವರಿ. ಎರಡು ತಿಂಗಳ ಹಣ ಒಟ್ಟಿಗೆ ಬರುತ್ತದೆ. ನನ್ನ ಮಾತು ಖಚಿತ. ಐದು ವರ್ಷವೂ ಈ ಯೋಜನೆಗಳು ನಿಶ್ಚಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ಮಾಜಿ ಶಾಸಕರಾದ ಕೆ.ರಾಜು, ಎಂ.ಸಿ.ಅಶ್ವತ್ಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಶಿವಕುಮಾರ್ ಸೇರಿ ಹಲವು ಅಧಿಕಾರಿಗಳು, ಈ ಭಾಗದ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.